BBMP
Loading ...

Mahiti Ayoga

Greater Bengaluru News9 : ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದ ಅರ್ಜಿದಾರರಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ್ದ ಬಿಡಿಎ ಅಧಿಕಾರಿಯೊಬ್ಬರಿಗೆ ಕರ್ನಾಟಕ ಮಾಹಿತಿ ಆಯೋಗ 4 ಪ್ರತ್ಯೇಕ ಪ್ರಕರಣಗಳಲ್ಲಿ 1 ಲಕ್ಷ ದಂಡ ವಿಧಿಸಿದೆ. ಅದೇ ರೀತಿ ಬಿಡಿಎ ಮತ್ತೊಬ್ಬ ಅಧಿಕಾರಿಗೆ ಕೂಡ ಪ್ರಕರಣವೊಂದರಲ್ಲಿ ಮಾಹಿತಿ ನೀಡದಿದ್ದಕ್ಕಾಗಿ 25 ಸಾವಿರ ರೂ ದಂಡ ವಿಧಿಸಿದೆ.

ಉಮೇಶ್, ಉಪಕಾರ್ಯದರ್ಶಿ -1 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಇವರೇ ಮಾಹಿತಿ ಆಯೋಗದಿಂದ 1 ಲಕ್ಷ ರೂ ದಂಡನೆಗೆ ಒಳಗಾದ ಅಧಿಕಾರಿ. ಅದೇ ರೀತಿ ಸಿ.ಎಲ್ ಶಿವಕುಮಾರ್ ಕಾರ್ಯದರ್ಶಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರಿಗೆ ಪ್ರತ್ಯೇಕ ಪ್ರಕರಣವೊಂದರಲ್ಲಿ ಆಯೋಗ 25 ಸಾವಿರ ರೂ ದಂಡ ಹಾಕಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳು ಕಾಯ್ದೆಯ ಕಲಂ 4 ರ ಅನ್ವಯ ತಮ್ಮ ಪ್ರಾಧಿಕಾರಗಳ ಹೊಣೆಗಾರಿಕೆಯನ್ನು ಕಾಲಕಾಲಕ್ಕೆ ನಿರ್ವಹಿಸಿದ ಕುರಿತು ತಮ್ಮ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಬೇಕು ಮತ್ತು ನಿರ್ವಹಿಸಿರಬೇಕು. ಈ ಬಗ್ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ಮಾಹಿತಿ ಹಕ್ಕು ಕಾಯ್ದೆಯ ಕಲಂ 4 ಅನ್ನು ಜಾರಿಗೊಳಿಸಿ, ನಿರ್ವಹಿಸಬೇಕು, ಕಾಲಕಾಲಕ್ಕೆ ಪರಿಷ್ಕರಿಸಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ತೀರ್ಪು ನೀಡಿತ್ತು. ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ 20 ವರ್ಷ ಕಳೆದರೂ ಇನ್ನೂ ಹಲವು ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆಯ ಕಲಂ 4 (1)(ಎ)ಮತ್ತು (ಬಿ) ಯನ್ನು ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಈ ಮಹತ್ವದ ತೀರ್ಪು ನೀಡಿತ್ತು . ಅದನ್ನು ಪಾಲಿಸುವುದು ಕಡ್ಡಾಯ ಆಗಿದ್ದರೂ ಇನ್ನೂ ಅಧಿಕಾರಿಗಳು ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಮಾಹಿತಿ ಆಯೋಗ ಬಿಡಿಎ ಅಧಿಕಾರಿಗೆ ದಂಡ ವಿಧಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉಪಕಾರ್ಯದರ್ಶಿ 1 ಕಚೇರಿಯಲ್ಲಿ ಆರ್‌ಟಿಐ ಕಾಯ್ದೆಯ ಕಲಂ 4 ರ ನಿರ್ವಹಣೆ ಕುರಿತಂತೆ ನಾಲ್ವರು ಅರ್ಜಿದಾರರು ತಮ್ಮ ಪ್ರತ್ಯೇಕ ಅರ್ಜಿಗಳಲ್ಲಿ ಮಾಹಿತಿ ಕೋರಿದ್ದರು. ಅರ್ಜಿದಾರರು ಸಲ್ಲಿಸಿದ ಕೋರಿಕೆಗೆ ಯಾವುದೇ ಮಾಹಿತಿ ನೀಡದೇ, ಉಪಕಾರ್ಯದರ್ಶಿ ಉಮೇಶ್ ನಿರ್ಲಕ್ಷ್ಯ ತೋರಿದ್ದರು. ಈ ಬಗ್ಗೆ ಅರ್ಜಿದಾರರಾದ ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ ಮತ್ತು ಬಾಲಚಂದ್ರ ರಾವ್ ಎಂಬುವರು ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ ಮಾಹಿತಿ ಆಯೋಗ ಉಮೇಶ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.. ಆದರೂ ಸದರಿ ಅಧಿಕಾರಿಯವರು ಅರ್ಜಿದಾರರಿಗೆ ಮಾಹಿತಿ ಒದಗಿಸಿರಲಿಲ್ಲ.. ಇದನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯೋಗ 4 ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25 ಸಾವಿರ ರೂನಂತೆ ಉಮೇಶ್ ಅವರಿಗೆ 1 ಲಕ್ಷ ರೂ ದಂಡ ವಿಧಿಸಿದೆ.. ಅಲ್ಲದೇ, ಮಾಹಿತಿ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸಿರುವ ಉಮೇಶ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಯಾಕೆ ಶಿಫಾರಸು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಮತ್ತೊಂದು ಪ್ರಕರಣದಲ್ಲಿ, ಬಿಡಿಎ ಹೆಚ್ಚುವರಿ ಭೂ ಸ್ವಾಧೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯ ಕುರಿತಂತೆ ಸರ್ಕಾರದ ಆದೇಶದ ಪ್ರತಿಯನ್ನು ಕೋರಿ, ಸುರೇಶ್ ಚಂದ್ರ ಬಾಬು ಎಂಬುವರು, ಬಿಡಿಎ ಕಾರ್ಯದರ್ಶಿ ಶಿವಕುಮಾರ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಶಿವಕುಮಾರ್ ಅವರು ಕೂಡ ಅರ್ಜಿದಾರರು ಕೋರಿರುವ ದಾಖಲೆ ಒದಗಿಸಿಲ್ಲ. ಹೀಗಾಗಿ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಮಾಹಿತಿ ನೀಡದ ಶಿವಕುಮಾರ್ ಅವರಿಗೆ 25 ಸಾವಿರ ರೂ ದಂಡ ವಿಧಿಸಿ, ಬಿಸಿ ಮುಟ್ಟಿಸಿದೆ. ಒಂದು ವೇಳೆ ಅರ್ಜಿದಾರರು ಕೋರಿರುವ ದಾಖಲೆಯನ್ನು ತಕ್ಷಣ ನೀಡದಿದ್ದಲ್ಲಿ ಶಿವಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

Leave a Reply

Your email address will not be published. Required fields are marked *