Greater Bengaluru News9 : ಬೀದಿಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಮರು ಒತ್ತುವರಿಯಾಗದಂತೆ ನಿರಂತರವಾಗಿ ನಿಗಾ ವಹಿಸಬೇಕು. ಒಂದೊಮ್ಮೆ ವ್ಯಾಪಾರಿಗಳು ಮತ್ತೆ ಒತ್ತುವರಿ ಮಾಡಿರುವುದು ಕಂಡುಬಂದರೆ, ಎಫ್ಐಆರ್ ದಾಖಲಿಸಿ ದಂಡ ವಿಧಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ, ಅನಾಥ ವಾಹನಗಳ ತೆರವು , ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಹಾಗೂ ನಿರಂತರ ಸ್ವಚ್ಛತಾ ಅಭಿಯಾನದ ಕುರಿತು ಶುಕ್ರವಾರ(ಸೆ.18ರಂದು) ಅಧಿಕಾರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.
ಈ ವೇಳೆ, ”ಬೆಂಗಳೂರಿನ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮುಕ್ತವಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ, ಕಳೆದ ಎರಡು ತಿಂಗಳಿನಿಂದ ಅಭಿಯಾನದ ಮಾದರಿಯಲ್ಲಿ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಈಗಾಗಲೇ 5 ಪಾಲಿಕೆಗಳ ವ್ಯಾಪ್ತಿಯಲ್ಲಿ 1373.32 ಕಿ.ಮೀ ಉದ್ದದ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ,” ಎಂದು ಹೇಳಿದರು.
”ನಗರದ ಹಲವೆಡೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಆದರೆ, ಕೆಲವೆಡೆ ವ್ಯಾಪಾರಿಗಳು ಮತ್ತೆ ಒತ್ತುವರಿಗೆ ಮುಂದಾಗಿದ್ದಾರೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು, ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಕಾರ್ಯಪಡೆ ರಚಿಸಬೇಕು. ತೆರವುಗೊಳಿಸಿದ ಪಾದಚಾರಿ ಮಾರ್ಗಗಳಲ್ಲಿ ನಿಯಮಿತ ಹಾಗೂ ಅನಿರೀಕ್ಷಿತ ಪರಿಶೀಲನೆ ನಡೆಸಿ, ಮರು ಒತ್ತುವರಿ ಕಂಡು ಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು,” ಎಂದು ಸೂಚಿಸಿದರು.
”ಮರು ಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಫೋಟೊ ಹಾಗೂ ಜಿಯೋಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ಮಾಡಬೇಕು. ಮಾರ್ಷಲ್ಗಳು ಹಾಗೂ ಗಸ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಪರಿಶೀಲನೆ ನಡೆಸಬೇಕು,” ಎಂದು ನಿರ್ದೇಶನ ನೀಡಿದರು.
ಮರು ಒತ್ತುವರಿಗೆ ಎಫ್ಐಆರ್, ದಂಡ!
”ಒತ್ತುವರಿ ತೆರವುಗೊಳಿಸಿದ್ದೇವೆ ಎಂದರೆ ಸಾಕಾಗುವುದಿಲ್ಲ. ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಒತ್ತುವರಿಯಾಗದಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಮರು ಒತ್ತುವರಿ ಮಾಡುವ ಪುನರಾವರ್ತಿತ ಉಲ್ಲಂಘನಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ವಸ್ತುಗಳನ್ನು ವಶಪಡಿಸಿಕೊಂಡು ನಿಯಮಾನುಸಾರ ಹೆಚ್ಚಿನ ದಂಡ ವಿಧಿಸಬೇಕು. ಈ ಸಂಬಂಧ ಅಧಿಕಾರಿಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿ, ಕೈಗೊಂಡ ಕ್ರಮಗಳ ಕುರಿತು ನಿಯಮಿತವಾಗಿ ಪ್ರಗತಿ ವರದಿ ಪರಿಶೀಲಿಸಬೇಕು,” ಎಂದು ಸೂಚಿಸಿದರು.
ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಇದೇ ಸಂದರ್ಭದಲ್ಲಿ, ”ಸಾರ್ವಜನಿಕರ ಸುರಕ್ಷತೆ ಮತ್ತು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದಷ್ಟೇ ನಮ್ಮ ಉದ್ದೇಶ. ಆ ಉದ್ದೇಶದ ಭಾಗವಾಗಿಯೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡದ್ದು. ಹೀಗಾಗಿ, ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆ ನೀಡದಂತೆಯೂ ನೋಡಿಕೊಳ್ಳಬೇಕು. ಬೀದಿ ವ್ಯಾಪಾರ ನಿರ್ಬಂಧಿತ ರಸ್ತೆಗಳ ಕುರಿತು ಸಂಬಂಧಿಸಿದ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಬೇಕು. ಮುಖ್ಯರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ವ್ಯಾಪಾರ ನಡೆಸಲು ಪರ್ಯಾಯ ಸ್ಥಳಗಳನ್ನು ಗುರುತಿಸಿ, ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು,” ಎಂದು ತಾಕೀತು ಮಾಡಿದರು.
ಅನಾಥ ವಾಹನಗಳ ತೆರವು ಚುರುಕುಗೊಳಿಸಿ
ಇನ್ನು, ಅನಾಥ ವಾಹನಗಳ ತೆರವು ಕಾರ್ಯದ ಕುರಿತು, ”ನಗರದ ನಾನಾ ಪೊಲೀಸ್ ಠಾಣೆಗಳ ಆವರಣದಲ್ಲಿ ಸುಮಾರು 11,346 ವಾಹನಗಳು ದೀರ್ಘ ಕಾಲದಿಂದ ಜಾಗವನ್ನು ಆಕ್ರಮಿಸಿಕೊಂಡಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಎರಡು ತಿಂಗಳಿಂದ ಅಗತ್ಯ ಪೂರ್ವಭಾವಿ ಸಭೆ ನಡೆಸಿ ನ್ಯಾಯಾಲಯ ಪ್ರಕರಣಗಳಲ್ಲಿ ಸಿಲುಕಿರುವ ವಾಹನಗಳನ್ನು ಬೇರೆಡೆ ಸಾಗಿಸಲು ವಿಶೇಷ ಮನವಿ ಸಲ್ಲಿಸಿ, ಕಂದಾಯ ಇಲಾಖೆಯ ಸಹಾಯದೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯು ಇದಕ್ಕಾಗಿಯೇ ಹೊರವಲಯದ 7 ಕಡೆಗಳಲ್ಲಿ 26 ಎಕರೆ ಜಾಗ ನೀಡಿದೆ. ಅಧಿಕಾರಿಗಳು ಆದಷ್ಟು ಶೀಘ್ರವಾಗಿ ಎಲ್ಲ ಜಪ್ತಿ ವಾಹನಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸಿ, ಜನರು ಅನುಭವಿಸುತ್ತಿರುವ ಕಿರಿಕಿರಿಗೆ ಮುಕ್ತಿ ನೀಡಬೇಕು,” ಎಂದು ಹೇಳಿದರು.
ಟೋಯಿಂಗ್ ವಾಹನಗಳ ಹರಾಜು
”ಟೋಯಿಂಗ್ ಮಾಡಿರುವ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಯಾರ್ಡ್ಗಳಲ್ಲಿ ಬಾಕಿ ಇರುವ ವಾಹನಗಳನ್ನು ತೆರವುಗೊಳಿಸಬೇಕು. ದಶಕಗಳ ಕಾಲ ಕೆಟ್ಟು ನಿಂತ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಮಾಡಲು ಸಾಧ್ಯವಾಗದಿದ್ದಲ್ಲಿ ಮುಖ್ಯ ಆಯುಕ್ತರು ಸೂಚಿಸಿದಂತೆ ನೋಂದಾಯಿತ ಗುಜರಿ ಸಂಗ್ರಹಕಾರರಿಗೆ ಹಸ್ತಾಂತರಿಸುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸಬೇಕು. ಇಂತಹ ಕ್ರಮದಿಂದ ಅನುಪಯುಕ್ತ ವಾಹನಗಳ ವಿಲೇವಾರಿ ಸುಲಭವಾಗುತ್ತದೆ,” ಎಂದು ಸಲಹೆ ನೀಡಿದರು.
ವಾರ್ಡ್ ಮಟ್ಟದಲ್ಲಿ ನಿರಂತರ ಸ್ವಚ್ಛತಾ ಅಭಿಯಾನ
”ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಭಾಗವಾಗಿ ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈಗಾಗಲೇ 5,267.65 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ. ಸ್ವಚ್ಛ ಬೆಂಗಳೂರಿಗಾಗಿ ಪ್ರತಿ ವಾರ್ಡ್ನಲ್ಲಿ ನಿರಂತರ ಹಾಗೂ ತೀವ್ರ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು. ಖಾಸಗಿ ನಿವೇಶನಗಳಲ್ಲಿ ತ್ಯಾಜ್ಯ ಸುರಿಯುತ್ತಿರುವ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ತ್ಯಾಜ್ಯ ತೆರವುಗೊಳಿಸದ ಖಾಸಗಿ ನಿವೇಶನಗಳ ಮಾಲೀಕರಿಗೆ ದಂಡ ವಿಧಿಸಿ, ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಬೇಕು,” ಎಂದು ಸೂಚಿಸಿದರು. ಈ ವೇಳೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಹಾಗೂ ನಗರ ಪಾಲಿಕೆಗಳ ಆಯುಕ್ತರು ಉಪಸ್ಥಿತರಿದ್ದರು.
ಜಪ್ತಿ ವಾಹನಗಳ ನಿಲುಗಡೆಗೆ ಗುರುತಿಸಿರುವ ಸ್ಥಳಗಳು
- ಕೆ.ಆರ್.ಪುರಂ ಹೋಬಳಿಯ ಹಗದೂರಿನಲ್ಲಿ 26 ಗುಂಟೆ
- ಬೆಂಗಳೂರು ಪೂರ್ವ ತಾಲೂಕಿನ ಯರಪ್ಪನಹಳ್ಳಿಯಲ್ಲಿ 35 ಗುಂಟೆ
- ಬೇಗೂರು ಹೋಬಳಿಯ ಹೊಂಗಸಂದ್ರದಲ್ಲಿ 1.01 ಎಕರೆ
- ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ 15 ಎಕರೆ
- ಯಲಹಂಕದ ಬಾಗಲೂರಿನಲ್ಲಿ 2 ಎಕರೆ
- ದಾಸನಪುರ ಹೋಬಳಿಯ ಬೊಮ್ಮಶೆಟ್ಟಿಹಳ್ಳಿಯಲ್ಲಿ 4 ಎಕರೆ

