Greater bengaluru news9 ಜನರಿಂದ ತಪ್ಪದೇ ವಿದ್ಯುತ್ ಬಿಲ್ ವಸೂಲಿ ಮಾಡುವ ಹೆಸ್ಕಾಂ (HESCOM), ಅದಕ್ಕೆ ಸರಿಯಾಗಿ ಸೇವೆಯನ್ನು ಮಾತ್ರ ನೀಡುತ್ತಿಲ್ಲ. ಇದೀಗ ಹೆಸ್ಕಾಂ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಅವಕಾಶ ನೀಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಹೆಸ್ಕಾಂ ವಿರುದ್ದ ಆಯೋಗದ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಜನರ ಮೇಲೆ ನಷ್ಟದ ಹೊರೆಯನ್ನು ಹಾಕಬಾರದು ಅಂತ ಆಗ್ರಹಿಸಿದರು.
ಆರ್ಥಿಕ ನಷ್ಟದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ
ಹುಬ್ಬಳ್ಳಿ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಏಳು ಜಿಲ್ಲೆಯ ಜನರು, ಕೈಗಾರಿಕೆಗಳು, ಐಪಿ ಸೆಟ್ಗಳಿಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿ, ವಿದ್ಯುತ್ ನೀಡಿದ್ದಕ್ಕೆ ಪ್ರತಿಯಾಗಿ ಬಿಲ್ನ್ನು ವಸೂಲಿ ಮಾಡುತ್ತದೆ. ಆದರೂ ಕೂಡ ಸಂಸ್ಥೆಗೆ 2024-25 ರ ಸಾಲಿನಲ್ಲಿ 188 ಕೋಟಿ ರೂ ಆದಾಯ ಕೊರತೆಯಾಗಿದೆಯಂತೆ. ಈ ಹಿಂದೆ ಅದನ್ನು 604 ಕೋಟಿ ರೂ ಆದಾಯ ಕೊರತೆ ಅಂತ ಹೇಳಿದ್ದ ಹೆಸ್ಕಾಂ, ಅದರಲ್ಲಿ ಕೆಲವನ್ನು ತಗೆದು 188 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ.
ಆರ್ಥಿಕ ನಷ್ಟವನ್ನು ಸರಿದೂಗಿಸಲು ಅವಕಾಶ ನೀಡಬೇಕು ಅಂತ ಹೆಸ್ಕಾಂ, ಕೆಲ ದಿನಗಳ ಹಿಂದೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಜನರ ಅಭಿಪ್ರಾಯ ಸಂಗ್ರಹಿಸಿದರು. ಈ ಸಮಯದಲ್ಲಿ ಹೆಸ್ಕಾಂ ವಿರುದ್ದ ಏಳು ಜಿಲ್ಲೆಗಳಿಂದ ಬಂದಿದ್ದ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಒಂದಡೆ ಹೆಸ್ಕಾಂ ಬೇಕಾಬಿಟ್ಟಿ ವೆಚ್ಚಗಳನ್ನು ಮಾಡುತ್ತಿದೆ. ಕಾಮಗಾರಿಗಳಲ್ಲಿ ಹಗರಣಗಳನ್ನು ಮಾಡುತ್ತಿದೆ. ಬರಬೇಕಾದ ಬಿಲ್ನ್ನು ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳು ತಾವು ಪ್ರಮಾಣಿಕವಾಗಿ ಮಾಡಬೇಕಾದ ಕೆಲಸವನ್ನು ಮಾಡದೇ, ಸಂಸ್ಥೆಗೆ ನಷ್ಟವನ್ನುಂಟು ಮಾಡುತ್ತಿದ್ದು, ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಅಂತ ಅರವಿಂದ್ ಪೈ ಎನ್ನುವವರು ಆಗ್ರಹಿಸಿದರು.
ಸಭೆಯಲ್ಲಿ ಹೆಸ್ಕಾಂನ ಅನೇಕ ಹಗರಣಗಳು, ಅಕ್ರಮ ಕೆಲಸಗಳನ್ನು ವಿವಿಧ ಜಿಲ್ಲೆಯಿಂದ ಬಂದಿದ್ದ ಗ್ರಾಹಕರು ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಮತ್ತೊಂದಡೆ ಸರಿಯಾಗಿ ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸದೇ ಇರೋದಕ್ಕೆ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಬಿಲ್ ಪಡೆಯುವ ಹೆಸ್ಕಾಂ, ಸೇವೆಯನ್ನು ಮಾತ್ರ ಸರಿಯಾಗಿ ನೀಡುತ್ತಿಲ್ಲ ಅಂತ ಹರಿಹಾಯ್ದರು. ರೈತರ ಪಂಪಸೆಟ್ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇರೋದು, ಟ್ರಾನ್ಸಪಾರ್ಮ್ಗಳು ಸುಟ್ಟಾಗ ಅವುಗಳನ್ನು ಬೇಗನೆ ರಿಪೇರಿ ಮಾಡದೇ ನೀಡದೇ ಇರೋದು ಸೇರಿದಂತೆ ಅನೇಕ ದೂರುಗಳನ್ನು ರೈತರು ಮತ್ತು ಸಾರ್ವಜನಿಕರು ಆಯೋಗದ ಮುಂದೆ ಪ್ರಸ್ತಾಪಿಸಿದರು.


