ಬೆಂಗಳೂರು: ಬಿಬಿಎಂಪಿ ವಹಿಗಳಲ್ಲಿ ದಾಖಲಾಗಿರುವ ಎಲ್ಲ ‘ಎ’ ಮತ್ತು ‘ಬಿ’ ಖಾತಾ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, 21 ಲಕ್ಷಕ್ಕೂ ಅಧಿಕ ಕರಡು ಇ – ಖಾತಾಗಳನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಕರಡು ಇ – ಖಾತಾಗಳನ್ನು ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಅಂತಿಮ ಇ – ಖಾತಾ ಪಡೆಯಲು ನಾಗರಿಕರು ಪಾಲಿಕೆಯಲ್ಲಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಇದು ಸಂಪೂರ್ಣವಾಗಿ ಆನ್ಲೈನ್ ಮತ್ತು ಸಂಪರ್ಕ ರಹಿತ ವ್ಯವಸ್ಥೆಯಾಗಿದೆ.
ಅಂತಿಮ ಇ – ಖಾತಾ ಪಡೆಯಲು ನಾಗರಿಕರು ಆನ್ಲೈನ್ ಮೂಲಕ ಕೆಲವೊಂದು ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ತಂತ್ರಾಂಶವು ಸ್ವಯಂ ಪರಿಶೀಲಿಸುತ್ತದೆ. ಬಳಿಕ ಸ್ವಯಂಚಾಲಿತವಾಗಿ ಅಂತಿಮ ಇ – ಖಾತಾವನ್ನು ಒದಗಿಸುತ್ತದೆ.
ನಮೂದಿಸಿದ ಮಾಹಿತಿ ಅಪೂರ್ಣವಾಗಿದ್ದರೆ ಅಥವಾ ಪಾಲಿಕೆ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ, ಅಂತಿಮ ಇ – ಖಾತಾ ನೀಡದಿರಲು ಯಾರಾದರೂ ಆಕ್ಷೇಪಣೆ ಸಲ್ಲಿಸಿದರೆ ಮಾತ್ರ ಸಾರ್ವಜನಿಕರು ಪಾಲಿಕೆಗೆ ಭೇಟಿ ನೀಡಬಹುದಾಗಿದೆ. ಇದು ಅತ್ಯಂತ ಪಾರದರ್ಶಕ ಮತ್ತು ನಾಗರಿಕರ ನಿಯಂತ್ರಣದಲ್ಲಿರುವ ಇ – ಖಾತಾ ವ್ಯವಸ್ಥೆ ಆಗಿದೆ.
ಅಂತಿಮ ಇ – ಖಾತಾಗೆ ಸಲ್ಲಿಸಬೇಕಿರುವ ದಾಖಲೆಗಳು
* ಇ – ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುವ ಕ್ರಯಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ
* 2004ರ ಏಪ್ರಿಲ್ 1 ರಿಂದ ಇಲ್ಲಿಯವರೆಗಿನ ಸ್ವತ್ತಿನ ಋುಣಭಾರ ಪ್ರಮಾಣಪತ್ರ ಹಾಗೂ ಇಸಿ ಸಂಖ್ಯೆ ನಮೂದಿಸಿದರೆ, ಇ – ಆಸ್ತಿ ತಂತ್ರಾಂಶವು ವಿದ್ಯುನ್ಮಾನವಾಗಿ ಕಾವೇರಿಯಿಂದ ಪಡೆಯುತ್ತದೆ
* ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆ ನಮೂದಿಸಿದರೆ, ಆ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುತ್ತದೆ
* ಆಸ್ತಿ ಮಾಲೀಕರ ಆಧಾರ್ ಇ – ಕೆವೈಸಿ
* ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ ನಮೂದಿಸಿದರೆ, ಆ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುತ್ತದೆ
* ಆಸ್ತಿಯ ಜಿಪಿಎಸ್ ಮತ್ತು ಆಸ್ತಿ ಭಾವಚಿತ್ರ ಸಲ್ಲಿಸಬೇಕು
* ‘ಎ’ ಖಾತಾಗಾಗಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು (ನಾಗರಿಕರು ದಾಖಲೆಗಳು ಲಭ್ಯವಿಲ್ಲವೆಂದು ಘೋಷಿಸಿದರೂ ಅಂತಿಮ ಇ – ಖಾತಾ ನೀಡಲಾಗುತ್ತದೆ)
ಕರಡು ಇ – ಖಾತಾ ಮಾಡಿಕೊಳ್ಳಲು ಲಿಂಕ್: www.bbmpeAasthi.karnataka.gov.in
ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಲೈನ್ಮ್ಯಾನ್ ದುರಂತ ಸಾವು!
ಅಕ್ಟೋಬರ್ ಮೊದಲ ವಾರ ಕರ್ನಾಟಕದಲ್ಲಿ ವ್ಯಾಪಕ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ


