Greater Bengaluru News9 : ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ, ಅದರಲ್ಲೂ ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ನೋಡಲು ಹೋಗುವವರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಪಂದ್ಯದ ದಿನದಂದು ಉಂಟಾಗುವ ಭಾರೀ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಬಿಎಂಆರ್ಸಿಎಲ್, ಕೆಎಸ್ಸಿಎ (KSCA) ಮತ್ತು ಆರ್ಸಿಬಿ ಮ್ಯಾನೇಜ್ಮೆಂಟ್ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಐಪಿಎಲ್ ಪಂದ್ಯದ ಟಿಕೆಟ್ ಹೊಂದಿರೋರು ಮೆಟ್ರೋಗೆ ಪ್ರತ್ಯೇಕ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ಅಗತ್ಯ ಇರೋದಿಲ್ಲ.
ವರದಿಗಳ ಪ್ರಕಾರ, ಐಪಿಎಲ್ ಪಂದ್ಯದ ಟಿಕೆಟ್ ಮೇಲೆಯೇ ವಿಶೇಷ ಕ್ಯೂಆರ್ ಕೋಡ್ (QR Code) ಅಳವಡಿಸಲು ತೀರ್ಮಾನಿಸಲಾಗಿದೆ. ಈ ಕೋಡ್ ಅನ್ನು ಮೆಟ್ರೋ ನಿಲ್ದಾಣದ ಗೇಟ್ಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ನಗರದ ಯಾವುದೇ ಭಾಗದಿಂದ ಕಬ್ಬನ್ ಪಾರ್ಕ್ ಅಥವಾ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಕ್ಕೆ ಉಚಿತವಾಗಿ ಪ್ರಯಾಣಿಸಬಹುದು. ಈ ಆಫರ್ ಕೇವಲ ಆರ್ಸಿಬಿ ಪಂದ್ಯ ನಡೆಯುವ ದಿನಗಳಿಗೆ ಮಾತ್ರ ಸೀಮಿತವಾಗಿರಲಿದೆ.
ಮಾರ್ಚ್ 28 ರಂದು ಮೊದಲ ಪಂದ್ಯ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28 ರಂದು ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದ್ದು, ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆರ್ಸಿಬಿ ಸೆಣಸಾಡಲಿದೆ. ನಂತರ ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಪಂದ್ಯ ನಡೆಯಲಿದೆ. ತವರಿನಲ್ಲಿ ನಡೆಯಲಿರುವ ಈ ಪಂದ್ಯಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕ್ರೀಡಾಂಗಣದ ಬಳಿ ಇತ್ತೀಚೆಗೆ ನಡೆದ ಘಟನೆಗಳ ನಂತರ ಪಂದ್ಯಗಳು ನಡೆಯುವ ಬಗ್ಗೆ ವದಂತಿಗಳಿದ್ದವು. ಈಗ ಪೊಲೀಸ್ ಮತ್ತು ಆಡಳಿತ ಮಂಡಳಿಯಿಂದ ಕ್ಲಿಯರೆನ್ಸ್ ಸಿಕ್ಕಿದ್ದು, ಪಂದ್ಯಗಳು ಅದ್ಧೂರಿಯಾಗಿ ನಡೆಯಲಿವೆ.


