BBMP
Loading ...

NAMMA-METRO-2

Greater Bengaluru News9 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ನಾಳೆ ಮೆಟ್ರೋ ದರ ಪರಿಷ್ಕರಣೆ ಆಗುತ್ತೋ ಇಲ್ವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. ಮೆಟ್ರೋ ದರ ಏರಿಕೆಗೆ ಬಿಎಂಆರ್‌ಸಿಎಲ್ ಬ್ರೇಕ್ ಹಾಕಿದೆ. ಸೋಮವಾರದಿಂದ ಶೇ.5ರಷ್ಟು ದರ ಏರಿಕೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ ಈ ಕುರಿತು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ದರ ಪರಿಷ್ಕರಣೆ ತೀರ್ಮಾನವನ್ನು ಕೈಬಿಟ್ಟಿದೆ. ಮೆಟ್ರೋ ದರ ಏರಿಕೆ ವಿಚಾರವಾಗಿ ಕೇಂದ್ರದಿಂದ BMRCL ಎಂ.ಡಿಗೆ ಮೇಲ್ ಮೂಲಕ ಮಾಹಿತಿ ಬಂದ ಹಿನ್ನೆಲೆ ಮೆಟ್ರೋ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಈ ಬಗ್ಗೆ ನ್ಯೂಸ್ 18ಗೆ BMRCL ಎಂ.ಡಿ ರವಿ ಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಶೇ.5ರಷ್ಟು ದರ ಪರಿಷ್ಕರಣೆಗೆ ಬಿಎಂಆರ್‌ಸಿಎಲ್ ಮುಂದಾಗಿತ್ತು. ದರ ಏರಿಕೆ ವಿಚಾರವಾಗಿ ಬಿಜೆಪಿ ನಾಯಕರು ಕೇಂದ್ರದ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ ಹಾಗಾಗಿ ಸೋಮವಾರ ದರ ಏರಿಕೆ ಫಿಕ್ಸ್ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಆದರೀಗ ಕೇಂದ್ರ ಸರ್ಕಾರದಿಂದ BMRCL ಎಂ.ಡಿಗೆ ಮೇಲ್ ಮೂಲಕ ಮಾಹಿತಿ ಬಂದಿದ್ದು, ದರ ಏರಿಕೆ ತೀರ್ಮಾನವನ್ನು ಬಿಎಂಆರ್‌ಸಿಎಲ್ ಕೈಬಿಟ್ಟಿದೆ. ದರ ನಿಗದಿ ಸಮಿತಿ ಜೊತೆ ನಾಳೆ ಮೀಟಿಂಗ್ ನಡೆಯಲಿದ್ದು, ಬೆಳಿಗ್ಗೆ ಬೋರ್ಡ್ ಮೀಟಿಂಗ್‌ನಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಾತ್ಕಾಲಿಕ ಸ್ಥಗಿತ ಎಂದ ನಮ್ಮ ಮೆಟ್ರೋ
ದರ ಏರಿಕೆ ಕೈ ಬಿಟ್ಟ ವಿಚಾರವಾಗಿ ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತಿಳಿಸುವುದೇನೆಂದರೆ, ದಿನಾಂಕ 5ನೇ ಫೆಬ್ರವರಿ 2026ರಂದು ಪ್ರಕಟಿಸಿದ್ದ ಮಾಧ್ಯಮ ಪ್ರಕಟಣೆಯಲ್ಲಿ ದಿನಾಂಕ 9ನೇ ಫೆಬ್ರವರಿ 2026ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಪರಿಷ್ಕೃತ ದರ ಕುರಿತು ಅಂತಿಮ ನಿರ್ಧಾರವನ್ನು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಪ್ರಕಟಿಸಲಾಗುವುದು. ಬಿಎಂಆರ್‌ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಕಸ್ತ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *