Greater Bengaluru News9 : ಬೆಂಗಳೂರಿನ ಐದು ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಭರ್ಜರಿ ಸಿದ್ಧತೆ ನಡೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಮನೆ – ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ತಾಳೆ ಮಾಡುವ ಕಾರ್ಯಕ್ಕೆ ಸಂಬಂಧಿಸಿದಂತೆ ಸಮಯ ವಿಸ್ತರಣೆಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಮಹೇಶ್ವರ್ ರಾವ್ ಅವರು ಚುನಾವಣಾ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ನಗರ ಪಾಲಿಕೆಗಳಿಗೆ ವಾರ್ಡ್ ವಾರು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿರುವ ಕುರಿತು ರಾಜ್ಯ ಚುನಾವಣಾ ಆಯೋಗದ ಪರಿಷ್ಕೃತ ಸುತ್ತೋಲೆಯಲ್ಲಿ ನೀಡಿರುವ ಸೂಚನೆಗಳ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿಯ ಸಭಾಂಗಣ-1ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದು, ಕೆಲವೊಂದು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.
ಜಿಬಿಎ ಚುನಾವಣೆಗೆ ಸಂಬಂಧಿಸಿದಂತೆ 19ನೇ ಜನವರಿ 2026 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, 22ನೇ ಜನವರಿ 2026 ರಂದು ರಾಜ್ಯ ಚುನಾವಣಾ ಆಯೋಗವು ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಆಯಾ ನಗರ ಪಾಲಿಕೆಗಳಲ್ಲಿ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇಂದಿನ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚುನಾವಣೆಗೆ ಸಂಬಂಧಿಸಿದ ಶಾಸನಬದ್ಧ ಕಾರ್ಯಗಳನ್ನು ಪೂರ್ಣಗೊಳಿಸಲು ಸಮಯ ವಿಸ್ತರಣೆ ಮಾಡುವ ಕುರಿತು ಪ್ರಸ್ತಾಪಿಸಿದ್ದು, ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೂಡಲೇ ಪತ್ರ ಬರೆಯಲು ಚುನಾವಣಾ ವಿಭಾಗಕ್ಕೆ ನಿರ್ದೇಶನ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿರುವಂತಹ ಐದು ನಗರ ಪಾಲಿಕೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ತಕ್ಷಣವೇ ಬಗೆಹರಿಸುವಂತೆ ಕ್ರಮ ಕೈಗೊಳ್ಳಬೇಕು, ಎಲ್ಲಾ ನಗರ ಪಾಲಿಕೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ರಾಮಚಂದ್ರನ್ ಅವರು ಮಾತನಾಡಿ, ಜಿಬಿಎ ಚುನಾವಣೆಗಾಗಿ ಈಗಾಗಲೇ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಬಿಎಲ್ಓಗಳು ಮನೆ – ಮನೆಗೆ ಭೇಟಿ ನೀಡಿ ನಿಗದಿತ ನಮೂನೆಗಳ ಮೂಲಕ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಿಬಿಎ ನಿಯಮಾನುಸಾರ ಮತಗಟ್ಟೆ
ಪ್ರಸ್ತುತ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಇತರೆ ಬದಲಾವಣೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಹಾಗೂ ದೋಷರಹಿತ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಮುಂದುವರಿದು ಗರಿಷ್ಠ 1,500 ಮತದಾರರಿಗೆ ಒಂದು ಮತಗಟ್ಟೆ ಇರಬೇಕೆಂದು ರಾಜ್ಯ ಚುನಾವಣಾ ಆಯೋಗವು ನಿರ್ದೇಶನ ನೀಡಿದ್ದು, ಅದರಂತೆ ಎಲ್ಲಾ ವಾರ್ಡ್ ಗಳಲ್ಲಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಜಿಬಿಎ ವ್ಯಾಪ್ತಿಯಲ್ಲಿರುವಂತಹ 5 ನಗರ ಪಾಲಿಕೆಗಳಲ್ಲಿ ಬೂತ್ ಮಟ್ಟದ ಏಜೆಂಟ್ಗಳ ಪಟ್ಟಿಯನ್ನು ಕೂಡಲೇ ಒದಗಿಸಬೇಕೆಂದು ಸೂಚಿಸಿ, ಯಾವುದೇ ದೂರುಗಳಿದ್ದಲ್ಲಿ ಆಯಾ ನಗರ ಪಾಲಿಕೆಗಳ ಆಯುಕ್ತರನ್ನು ನೇರವಾಗಿ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದಿದ್ದಾರೆ.
ಜಿಬಿಎ ಅವಧಿ ವಿಸ್ತರಣೆಗೆ ಮನವಿ
ಒಂದು ವಾರ್ಡ್ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಮತದಾರರ ಹೆಸರುಗಳು ಒಂದಕ್ಕಿಂತ ಹೆಚ್ಚು ವಾರ್ಡ್ ಗಳ ಮತದಾರರ ಪಟ್ಟಿಯಲ್ಲಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವುದು, ವಾರ್ಡ್ ಮತದಾರರ ಪಟ್ಟಿಯನ್ನು ಆಯಾ ವಾರ್ಡ್ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಮತದಾರರ ಪಟ್ಟಿಯೊಂದಿಗೆ ತಾಳೆ ಮಾಡುವುದು ಹಾಗೂ 1ನೇ ಅಕ್ಟೋಬರ್ 2025 ನಂತರ ಪ್ರಕಟವಾಗುವ ವಿಧಾನಸಭಾ ಮತದಾರರ ಪೂರಕ ಪಟ್ಟಿಗಳಂತೆ ಮತದಾರರನ್ನು ವಾರ್ಡ್ ಕರಡು ಮತದಾರರ ಪಟ್ಟಿಗೆ ಪೂರಕ ಪಟ್ಟಿ-1 ರೂಪಿಸುವ ಸಲುವಾಗಿ ಆನ್ಲೈನ್ (Online) ಮ್ಯಾಟ್ರಿಕ್ಸ್ ಸಾಫ್ಟ್ ವೇರ್ ನಲ್ಲಿ (From-To Matrix) ಅಳವಡಿಸುವ ಕಾರ್ಯಕ್ಕೆ ಸಮಯ ವಿಸ್ತರಣೆ ನೀಡುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದಾರೆ. ಈ ಕೆಲಸಕ್ಕೆ ವ್ಯಾಪಕವಾದ ಪ್ರಚಾರ ಕೈಗೊಳ್ಳಲು ಮನವಿ ಮಾಡಿದರು. ಅದೇ ರೀತಿ ಎಲ್ಲಾ ಮತದಾರರಿಗೂ ಕೂಡಾ ಸಹಕರಿಸುವಂತೆ ಕೋರಿದ್ದಾರೆ.


