BBMP
Loading ...

Siddaramaiah

ಬೆಂಗಳೂರು: ಮುಡಾ ಅಕ್ರಮ  ನಿವೇಶನ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆಗೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಂದು (ಸೆ.27) ಎಫ್​ಐಆರ್​ ದಾಖಲಾಗಿದೆ.

ಮುಡಾ ಪ್ರಕರಣ ಸಂಬಂಧ ಸೆ.24 ರಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿತು. ಹಗರಣ ಸಂಬಂಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ ಚಂದ್​ ಗೆಹ್ಲೋಟ್​ ಕ್ರಮವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೊರ್ಟ್​ ವಜಾಗೊಳಿಸಿ, ತನಿಖೆ ಎದುರಿಸಬೇಕೆಂದು ಹೇಳಿತು. ಇದಾದ ಬಳಿಕ ಸೆ.25ರಂದು ಜನಪ್ರತಿನಿಧಿಗಳ ನ್ಯಾಯಾಲಯ ತನಿಖೆಗೆ ಆದೇಶಿಸಿ, ಎಫ್​ಐಆರ್​ ದಾಖಲಿಸಲು ಮೈಸೂರು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿತು. ಇಂದು (ಸೆ.27) ಮೈಸೂರಿನ ಲೋಕಾಯುಕ್ತ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಲೋಕಾಯುಕ್ತ ಎಸ್​ಪಿ ಉದೇಶ್​ ಅವರು ಖುದ್ದು ಎಫ್​ಐಆರ್​ ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಎ1, ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಎ2, ಬಾಮೈದ ಮಲ್ಲಿಕಾರ್ಜುನಸ್ವಾಮಿ ಎ3, ಭೂ ಮಾಲೀಕ ದೇವರಾಜು ಎ4 ಮತ್ತು ಇತರರನ್ನು ಎ5 ಆರೋಪಿಗಳೆಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮುಡಾ ಸಂಕಷ್ಟ ಎದುರಾಗಿದೆ.

ಈ ಹಗರಣ ಸಂಬಂಧ 6 ವಾರಗಳ ಒಳಗಾಗಿ ಸಿಆರ್​ಪಿಸಿ ಸೆ.156(3) ಅಡಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳು ನ್ಯಾಯಾಲಯ ಗಡುವು ನೀಡಿದೆ.

ಹೈಕೋರ್ಟ್​ ಹೇಳಿದ್ದೇನು?
ಪ್ರಾಸಿಕ್ಯೂಷನ್​ಗೆ ಖಾಸಗಿ ದೂರುದಾರರೇ ಅನುಮತಿ ಕೋರಬಹುದಾಗಿದೆ. 17ಎ ಅಡಿಯಲ್ಲಿ ಅನುಮತಿ ಕೋರಿರುವ ಕ್ರಮ ಸರಿಯಾಗಿದೆ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ತಿರಸ್ಕರಿಸಿದ್ದು ಸೂಕ್ತವಾಗಿದೆ. 17ಎ ಅಡಿ ಪ್ರಾಸಿಕ್ಯೂಷನ್​ಗೆ ಆದೇಶ ಹೊರಡಿಸಿರುವುದು ಸಮರ್ಪಕವಾಗಿದೆ. ಇಲ್ಲಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿದ್ದಾರೆ ಎಂದು ತೀರ್ಪು ಪ್ರಕಟಿಸುವಾಗ ಹೈಕೋರ್ಟ್​ ಹೇಳಿತು.

ನ್ಯಾಯಾಲಯದ ಆದೇಶದಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಈ ಆದೇಶಕ್ಕೆ ತಡೆ ನೀಡುವಂತೆ ಸಿಎಂ ಪರ ವಕೀಲರ ಮನವಿ ಮಾಡಿದ್ದರು. ಆದರೆ ನ್ಯಾಯಪೀಠ ‌ನಿರಾಕರಿಸಿದ್ದು, ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದಿದೆ. ಈ ಪ್ರಕರಣದಲ್ಲಿ ಸಿಎಂ ಕುಟುಂಬಸ್ಥರು ಫಲಾನುಭವಿಗಳಾಗಿದ್ದು, ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. ಹೀಗಾಗಿ ಸೂಕ್ತ ತನಿಖೆ ಅಗತ್ಯ ಎಂದು‌ ನ್ಯಾಯಪೀಠ ಅಭಿಪ್ರಾಯ ಪಟ್ಟಿದ್ದು, ಸಿಎಂ ಎತ್ತಿದ್ದ ಎಲ್ಲ ಕಾನೂನಿನ ಪ್ರಶ್ನೆಗಳನ್ನು ತಳ್ಳಿ ಹಾಕಿದೆ.

ಏನಿದು ಮುಡಾ ಅಕ್ರಮ ಪ್ರಕರಣ: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮುಡಾ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಅನ್ನೋ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ದಾಖಲೆಗಳ ಜೊತೆ ಆರೋಪಿಸಿರುವ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ನೀಡಿ ಲಾಭ ಮಾಡಿಕೊಟ್ಟಿರುವುದು ನಿಜ. ಮೈಸೂರಿನ ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯಲ್ಲಿ 3.16 ಗಂಟೆ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನವನ್ನು ಸಿಎಂ ಪತ್ನಿಯ ಹೆಸರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.

ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ?: ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮುಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಡಾದ 50:50 ಹಗರಣದಲ್ಲಿ ಅವರು ಸಿಎಂ ಪತ್ನಿಯು ಭಾಗಿಯಾಗಿದ್ದಾರೆ ಎಂದು ಗಂಗರಾಜು ಹೇಳಿದ್ದರು.

ಮುಡಾ ವಿರುದ್ಧದ ಆರೋಪವೇನು?: ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38ಸಾವಿರದ 284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪವಾಗಿದೆ. ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

4.50 ಲಕ್ಷ ರೂ. ಲಂಚಕ್ಕೆ ಕೈಯೊಡ್ಡಿದ್ದ ಬಿಬಿಎಂಪಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

Leave a Reply

Your email address will not be published. Required fields are marked *