Greater Bengaluru News9 :- ಲೈಂಗಿಕ ದೌರ್ಜನ್ಯಕ್ಕೊಳಗಾಗಿ ದೂರು ನೀಡಲು ಬಂದ ಸಂತ್ರಸ್ತೆಯ ಮೇಲೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿರುವ ಘಟನೆ ಆನೇಕಲ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.
ಸಂತ್ರಸ್ತೆಯ ದೂರು ದಿಕ್ಕು ತಪ್ಪಿಸಲು ಹೊಸ ತಂತ್ರ ಬಳಸಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹೊಟ್ಟೆ ನೋವಿಗಾಗಿ ಸ್ಕ್ಯಾನಿಂಗ್‌ಗೆ ಬಂದಿದ್ದ ಮಹಿಳೆಯ ಮೇಲೆ ರೇಡಿಯಾಲಜಿಸ್ಟ್ ಜಯಕುಮಾರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂಬ ಆರೋಪ ಕೇಳಿಬಂದಿತ್ತು. ಘಟನೆಯ ವಿಡಿಯೋ ಸಾಕ್ಷಿ ಲಭ್ಯವಿದ್ದರೂ, ದೂರು ದಾಖಲಾದ ನಂತರವೂ ಆರೋಪಿ ಪೊಲೀಸ್ ಠಾಣೆಗೆ ಬಂದು ಹೋದರೂ ಬಂಧನವಾಗದೇ, ಅವರನ್ನು ಬಿಟ್ಟು ಕಳುಹಿಸಿದ್ದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಬಳಿಕ ಕರವೇ ಹಾಗೂ ಸಾರ್ವಜನಿಕರ ಧರಣಿ–ಹೋರಾಟದ ಒತ್ತಡದ ಮಧ್ಯೆ ಜಯಕುಮಾರ್ ಅವರನ್ನು ಬಂಧಿಸಲಾಗಿದೆ.
ಆದರೆ ಈಗ ವಿವಾದಕ್ಕೆ ಮತ್ತೊಂದು ತಿರುವು ದೊರೆತಿದೆ. ಆರೋಪಿ ರೇಡಿಯಾಲಜಿಸ್ಟ್ ಅವರ ಪತ್ನಿ ಸಂತ್ರಸ್ತೆಯ ಮೇಲೆ ಸುಳ್ಳು ದೂರು, ಹನಿಟ್ರ್ಯಾಪ್ ಮತ್ತು ಹಣ ವಸೂಲಿಗೆ ಪ್ರಯತ್ನಿಸಿದ ಆರೋಪ ಮಾಡಿದ್ದು, ಅದನ್ನೇ ಆಧಾರ ಮಾಡಿಕೊಂಡು ಪೊಲೀಸರು ಸಂತ್ರಸ್ತೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಘಟನೆ ನಡೆದಿದ್ದು 20 ದಿನಗಳಾದ ನಂತರವೇ ಆರೋಪಿ ಪತ್ನಿ ದೂರು ನೀಡಿರುವುದು, ಪೊಲೀಸರು ಸಂತ್ರಸ್ತೆಯ ಮೇಲೆ ಪ್ರಕರಣ ದಾಖಲಿಸಲು ತೋರಿದ ತ್ವರೆ, ಮತ್ತು ಯಾವುದೇ ಪ್ರಾಥಮಿಕ ಸಾಕ್ಷ್ಯವಿಲ್ಲದಿದ್ದರೂ ದೂರು ಸ್ವೀಕರಿಸಿರುವುದು ಜನರ ಪ್ರಶ್ನೆಗೆ ಕಾರಣವಾಗಿದೆ.
ಸ್ಥಳೀಯರು ಹಾಗೂ ಹೋರಾಟಗಾರರ ಆರೋಪ ಪ್ರಕಾರ, ಹಣದಾಸೆ ಮತ್ತು ಬಲಾಢ್ಯರ ಒತ್ತಡಕ್ಕೆ ಒಳಗಾಗಿ ಪೊಲೀಸರೇ ಆರೋಪಿಗಳ ಪರ ನಿಂತಿದ್ದಾರೆ. ತನಿಖಾಧಿಕಾರಿ ತಿಪ್ಪೆಸ್ವಾಮಿಯನ್ನು ತಕ್ಷಣ ಬದಲಾಯಿಸಿ, ಮೇಲಧಿಕಾರಿಗಳಿಂದ ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ. ಜೊತೆಗೆ, ಸಂತ್ರಸ್ತೆಯ ವಿರುದ್ಧ ದಾಖಲಿಸಿದ ಎಫ್‌ಐಆರ್ ರದ್ದುಪಡಿಸಬೇಕೆಂದು ಸಾರ್ವಜನಿಕರು ಹಾಗೂ ಹೋರಾಟಗಾರರು ಆಗ್ರಹ ವ್ಯಕ್ತಪಡಿಸಿದ್ದಾರೆ.


