Greater Bengaluru News9 : ರಾಜ್ಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಇದೀಗ ಅಡುಗೆ ಎಣ್ಣೆ ದರ ಏರಿಕೆಯೂ ಮತ್ತೊಂದು ದೊಡ್ಡ ಹೊರೆ ಆಗಿದೆ. ಕೆಲ ದಿನಗಳಿಂದ ಸ್ಥಿರವಾಗಿದ್ದ ಅಡುಗೆ ಎಣ್ಣೆ ಬೆಲೆ ಇದೀಗ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಕಂಡಿದೆ.
ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಲೀಟರ್ ಅಡುಗೆ ಎಣ್ಣೆ 138 ರೂಪಾಯಿಗೆ ಮಾರಾಟವಾಗುತ್ತಿದ್ದು, ಸೋಮವಾರದ ವಹಿವಾಟಿನ ವೇಳೆಗೆ ಅದರ ದರ 141 ರೂಪಾಯಿಗೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಆಮದು ವೆಚ್ಚದ ಹೆಚ್ಚಳವೇ ಈ ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರ ವಲಯ ವಿಶ್ಲೇಷಿಸಿದೆ.
ಬೆಲೆ ಏರಿಕೆಯ ಪರಿಣಾಮ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಹೋಟೆಲ್ ಉದ್ಯಮಕ್ಕೂ ಹೆಚ್ಚುವರಿ ಆರ್ಥಿಕ ಹೊರೆ ಎದುರಾಗುವ ಆತಂಕ ವ್ಯಕ್ತವಾಗಿದೆ.
ಭಾರತವು ಅಡುಗೆ ಎಣ್ಣೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳ ಮೇಲೆ ಅವಲಂಬಿತವಾಗಿರುವುದರಿಂದ, ತೈಲ ಉತ್ಪಾದಕ ರಾಷ್ಟ್ರಗಳ ರಾಜಕೀಯ ಬೆಳವಣಿಗೆಗಳು ಮತ್ತು ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಅಡುಗೆ ಎಣ್ಣೆಯ ಮಿತ ಬಳಕೆಯಿಂದ ಆರೋಗ್ಯದ ಮೇಲಿನ ಹಿತಕರ ಪರಿಣಾಮಗಳ ಜೊತೆಗೆ ದೇಶದ ವಿದೇಶಿ ವಿನಿಮಯ ವೆಚ್ಚದ ಮೇಲಿನ ಒತ್ತಡವೂ ಕಡಿಮೆಯಾಗಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.


