BBMP
Loading ...

Siddaramaiah

Greater Bengaluru News9 : ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದವು. ಹೀಗಾಗಿ ನಾವಿಂದು ಮಾತನಾಡಬೇಕಾಯಿತು. ನಮ್ಮ ಉದ್ದೇಶ ಏನೆಂದರೆ, 2028ರ ಚುನಾವಣೆ ಕೂಡ ನಮಗೆ ತುಂಬಾ ಮುಖ್ಯ. ಅಷ್ಟೇ ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ಮುಖ್ಯವಾಗಿದೆ. 2023ರ ಚುನಾವಣೆಯಂತೆಯೇ ಮುಂದಿನ ಚುನಾವಣೆಯಲ್ಲೂ ನಾನು ಮತ್ತು ಡಿಕೆಶಿ ಒಗ್ಗಟಾಗಿ ಇರುತ್ತೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಇಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಜತೆ ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲಿ ಬ್ರೇಕ್​ಫಾಸ್ಟ್​ ಮೀಟಿಂಗ್​ ಮಾಡಿದ ಸಿಎಂ ಸಿದ್ದರಾಮಯ್ಯ, ಬಳಿಕ ಡಿಕೆಶಿ ಜತೆಗೂಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ನಾನು, ಡಿಸಿಎಂ ಮತ್ತು ಪೊನ್ನಣ್ಣ ತಿಂಡಿಯಲ್ಲಿ ಭಾಗಿಯಾಗಿದ್ದೆವು. ನಾವು ಅಲ್ಲಿ ಯಾವುದೇ ವಿಚಾರವನ್ನು ಮಾತನಾಡಲಿಲ್ಲ. ಡಿಕೆಶಿ ಅವರು ಇಂದು ನಮ್ಮ ಮನೆಗೆ ಬಂದಿದ್ದರು. ನಾವಿಬ್ಬರು ಒಟ್ಟಿಗೆ ಬ್ರೇಕ್​ಫಾಸ್ಟ್​ ಮಾಡಿದ್ದೇವೆ. ಏಕೆಂದರೆ, ನಮ್ಮ ಹೈಕಮಾಂಡ್​ನವರು ಅಂದರೆ, ವೇಣುಗೋಪಾಲ್​ ಅವರು ಮೊನ್ನೆಯೇ ಪೊನ್ನಣ್ಣ ಅವರಿಗೆ ಫೋನ್​ ಮಾಡಿದ್ದರು. ಡಿಕೆಶಿ ಅವರನ್ನು ಬ್ರೇಕ್​ಫಾಸ್ಟ್​ಗೆ ಕರೆಯಿರಿ ಅಂತ ಹೇಳಿ ಫೋನ್​ ಮಾಡಿದ್ದರು. ಇದೇ ವೇಳೆ ಡಿಕೆಶಿ ಅವರು ಕೂಡ ಫೋನ್​ ಮಾಡಿ, ಊಟಕ್ಕೆ ಬರುವಂತೆ ಕರೆದರು. ಆದರೆ, ನನಗೆ ಹೈಕಮಾಂಡ್​ ಹೇಳಿದ್ದರಿಂದ ನಾನೇ ಬ್ರೇಕ್​ಫಾಸ್ಟ್​ಗೆ ಕರೆದೆ ಮತ್ತು ಮತ್ತೊಂದು ದಿನ ಊಟಕ್ಕೆ ಅವರ ಮನೆಗೆ ಹೋಗುವುದಾಗಿ ಹೇಳಿದೆ. ಇಬ್ಬರು ಬ್ರೇಕ್​ಫಾಸ್ಟ್​ ವೇಳೆ ಉಭಯ ಕುಶಲೋಪರಿ ನಡೆಸಿದೆವು ಎಂದು ಸಿದ್ದರಾಮಯ್ಯ ಹೇಳಿದರು.

ಇಂದು ನಾವಿಬ್ಬರು ಭೇಟಿ ಮಾಡಿದ ಮುಖ್ಯ ಉದ್ದೇಶ ಏನೆಂದರೆ, ಅನಗತ್ಯವಾಗಿ ಕೆಲವು ಗೊಂದಲಗಳು ರಾಜ್ಯದಲ್ಲಿ ನಿರ್ಮಾಣವಾಗಿವೆ. ಕಳೆದ ಒಂದು ತಿಂಗಳಿಂದ ಸಾಕಷ್ಟು ಗೊಂದಲಗಳು ಮೂಡಿವೆ. ಹೀಗಾಗಿ ನಾವಿಬ್ಬರು ಕುಳಿತು ಮಾತನಾಡಿದೆವು. ನಮ್ಮ ಉದ್ದೇಶ ಏನೆಂದರೆ, 2028ರ ಚುನಾವಣೆ ತುಂಬಾ ಮುಖ್ಯ. ಅಷ್ಟೇ ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ನಮಗೆ ಮುಖ್ಯವಾಗಿದೆ. 2023ರ ಚುನಾವಣೆಯಂತೆಯೇ ಮುಂದಿನ ಚುನಾವಣೆಯಲ್ಲೂ ನಾನು ಮತ್ತು ಡಿಕೆಶಿ ಒಗ್ಗಟಾಗಿ ಇರುತ್ತೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ನಾವಿಬ್ಬರು ಯಾವ ರೀತಿ ಒಟ್ಟಿಗೆ ಹೋದೆವೋ ಅದೇ ರೀತಿ ಒಟ್ಟಿಗಿರಬೇಕು. ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಡಿಸೆಂಬರ್​ 8 ರಿಂದ ಚಳಿಗಾಲದ ಅಧಿವೇಶನ ಆರಂಭ ಆಗುತ್ತದೆ‌. ಪ್ರತಿಪಕ್ಷಗಳು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಸುಳ್ಳು ಹೇಳುವುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಚಾಳಿಯಾಗಿದೆ. ಅಧಿವೇಶನದಲ್ಲಿ ವಿಪಕ್ಷಗಳನ್ನು ಸರ್ಕಾರ ಸಮರ್ಥವಾಗಿ ಎದುರಿಸುತ್ತದೆ. ನಾನು, ಡಿಸಿಎಂ ಇಬ್ಬರೂ ಸೇರಿ ತಂತ್ರಗಾರಿಕೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಮ್ಮಿಬ್ಬರ ತೀರ್ಮಾನ ಏನೆಂದರೆ, ಹೈಕಮಾಂಡ್ ಹೇಳಿದಂತೆ ಕೇಳುವುದು. ಅಧಿವೇಶನ ಇರುವುದರಿಂದ ಗೊಂದಲ ತಿಳಿ ಮಾಡುವ ಕೆಲಸ ಮಾಡುವಂತೆ ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ. ಕೆಲವು ಮಾಧ್ಯಮಗಳು ಗೊಂದಲ ಸೃಷ್ಟಸಿವೆ. ಕೆಲವು ಶಾಸಕರು ದೆಹಲಿಗೆ ಹೋಗಿದ್ದಾರೆಂದರೆ ಅದು ನಾಯಕತ್ವದ ವಿರುದ್ಧ ಅಂತಲ್ಲ. ಒಟ್ಟಾರೆಯಾಗಿ ನಾವು ಹೈಕಮಾಂಡ್ ಸೂಚನೆಯಂತೆ ಹೋಗುತ್ತೇವೆ. ನಾನು ಮತ್ತು ಡಿಸಿಎಂ ಇದನ್ನೇ ಚರ್ಚೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *