Greater Bengaluru News9:- ಅಪರಾಧ ಪ್ರಕರಣಗಳಲ್ಲಿ ಪದೇಪದೇ ಪೊಲೀಸರೇ ಭಾಗಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ, ರಾಜ್ಯದ ಪೊಲೀಸ್ ಇಲಾಖೆಯ ಶಿಸ್ತು–ಸಮಗ್ರತೆಯ ಮೇಲೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಐಜಿಪಿ ಡಾ. ಸಲೀಂ, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಅಕ್ರಮ, ದುರ್ವರ್ತನೆ ಮತ್ತು ಅಪರಾಧ ಚಟುವಟಿಕೆಗಳು ಇಲಾಖೆಗೆ ಕೆಟ್ಟ ಹೆಸರು ತರುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಅಪರಾಧಿಕ ಕೃತ್ಯದಲ್ಲಿ ಭಾಗಿಯಾದರೆ ಕಠಿಣ ಶಿಸ್ತಿನ ಕ್ರಮ ಅನಿವಾರ್ಯ ಎಂದು ಡಿಜಿ ಸ್ಪಷ್ಟ ಸಂದೇಶ ನೀಡಿದ್ದಾರೆ.
ಜಿಲ್ಲಾವಾರು ಅಧಿಕಾರಿಗಳಿಗೆ ಅಧೀನ ಸಿಬ್ಬಂದಿಗೆ ಕಾನೂನು ಪಾಲನೆ, ನೈತಿಕ ಮಾನದಂಡ ಮತ್ತು ಕರ್ತವ್ಯ ನಿಷ್ಠೆಯ ಕುರಿತು ಜಾಗೃತಿ ಮೂಡಿಸಲು ನಿರ್ದೇಶನಿಸಲಾಗಿದೆ. ಭ್ರಷ್ಟಾಚಾರ ಸೇರಿ ಎಲ್ಲ ರೀತಿಯ ದುರ್ನಡತೆಯನ್ನು ತಡೆಯಲು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಸೂಚಿಸಲಾಗಿದೆ. ಯಾವುದೇ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾದರೆ ತಕ್ಷಣ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಕಡ್ಡಾಯವೆಂದು ಆದೇಶ ಹೊರಡಿಸಲಾಗಿದೆ.
ನಿಯಮ ಉಲ್ಲಂಘನೆ ನಡೆದರೆ ಸಂಬಂಧಿತ ವಿಭಾಗದ ಹಿರಿಯ ಅಧಿಕಾರಿಯ ಮೇಲೆಯೇ ಶಿಸ್ತು ಕ್ರಮ ಜರುಗಲಿದೆ ಎಂದು ಡಿಜಿ ಎಚ್ಚರಿಸಿದ್ದಾರೆ. ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಯ ವಿಷಯದಲ್ಲಿ ಯಾವುದೇ ರೀತಿಯ ರಾಜಿಯಿಲ್ಲ; ಈ ಸಂಸ್ಥೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಆದ್ಯ ಕರ್ತವ್ಯ ಎಂದು ಡಾ. ಸಲೀಂ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.


