BBMP
Loading ...

Seemanth Kumar

Greater Bengaluru News9 : ಹೊಸವರ್ಷ 2026ರ ಕೌಂಟ್‌ಡೌನ್ ಆರಂಭವಾಗುತ್ತಿದ್ದಂತೆ ನಗರದಲ್ಲಿ ಭದ್ರತೆ ಕಠಿಣಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬೆಂಗಳೂರು ಪೊಲೀಸ್ ಇಲಾಖೆ ಫುಲ್ ಅಲರ್ಟ್‌ಗೆ ಹೋಗಿದೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ನಗರದ ಪ್ರಮುಖ ಪ್ರದೇಶಗಳಲ್ಲಿ ಸಿಟಿ ರೌಂಡ್ಸ್ ನಡೆಸಿ ಭದ್ರತಾ ಪರಿಶೀಲನೆ ಕೈಗೊಂಡರು. ಬಳಿಕ ಆಯುಕ್ತರ ಕಚೇರಿಯಲ್ಲಿ ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯ ನಂತರ ಮಾತನಾಡಿದ ಆಯುಕ್ತರು, ನ್ಯೂ ಇಯರ್ ಸಂಭ್ರಮದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸುಮಾರು 30 ಅಂಶಗಳ ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಕ್ಲೌಡ್ ಕಂಟ್ರೋಲ್, ವಯೋಮಿತಿ ಪಾಲನೆ, ಕಾರ್ಯಾವಧಿ ನಿಯಂತ್ರಣ, ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ಮಹಿಳೆಯರ ಸುರಕ್ಷತೆ ಸೇರಿದಂತೆ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಬೌನ್ಸರ್‌ಗಳ ವರ್ತನೆ ಕುರಿತು ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಮಾಲೀಕರಿಗೆ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಎಂಟ್ರಿ–ಎಕ್ಸಿಟ್ ವ್ಯವಸ್ಥೆ, ಅಗ್ನಿ ಸುರಕ್ಷತೆ, ಪಾರ್ಕಿಂಗ್ ವ್ಯವಸ್ಥೆ, ತುರ್ತು ಸಂಪರ್ಕ ಸಂಖ್ಯೆಗಳ ವ್ಯವಸ್ಥೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಸೂಚನೆ ನೀಡಲಾಗಿದೆ. ಅಕ್ರಮ ಅಥವಾ ರೇವ್ ಪಾರ್ಟಿಗಳಿಗೆ ಅವಕಾಶ ಇರಬಾರದು, ಪಟಾಕಿ ಹಾಗೂ ಯಾವುದೇ ಆಯುಧಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಜನರು ಒಳಗೆ–ಹೊರಗೆ ಸಂಚರಿಸುವ ವೇಳೆ ಸರತಿ ಸಾಲು ವ್ಯವಸ್ಥೆ ಕಡ್ಡಾಯವಾಗಿದ್ದು, ಮ್ಯಾನೇಜರ್‌ಗಳು ಹಾಗೂ ಸಿಬ್ಬಂದಿ ಮದ್ಯಪಾನ ಮಾಡಿರಬಾರದು ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.

ಹೆಚ್ಚುವರಿ ಸಮಯ ಓಪನ್ ಮಾಡಲು ಮನವಿ ಬಂದಿದ್ದರೂ, ರಾತ್ರಿ 1 ಗಂಟೆಗೆ ಕ್ಲೋಸ್ ಕಡ್ಡಾಯ ಎಂದು ಆಯುಕ್ತರು ತಿಳಿಸಿದ್ದಾರೆ. ಹೊಸವರ್ಷವನ್ನು ಜವಾಬ್ದಾರಿಯಿಂದ ಹಾಗೂ ಶಾಂತಿಯುತವಾಗಿ ಆಚರಿಸುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನಾಗರಿಕರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *