BBMP
Loading ...

GBA

Greater Bengaluru News9 : ‘ಸುಪ್ರೀಂ ಕೋರ್ಟ್‌ ಆದೇಶದಂತೆ 2026ರ ಜೂನ್‌ 30ರ ಒಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಪಾಲಿಕೆಗಳಿಗೆ ಚುನಾವಣೆ ನಡೆಸಿ’ ಎಂದು ರಾಜ್ಯಪಾಲರ ಕಚೇರಿಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಪತ್ರ ಬರೆದಿದೆ.

‘ಪಾಲಿಕೆಗಳಿಗೆ ಚುನಾವಣೆ ನಡೆದು ಹಲವು ವರ್ಷಗಳೇ ಕಳೆದಿವೆ. ಬೆಂಗಳೂರಿನಂತಹ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇಲ್ಲದಂತಾಗಿದೆ. ಕಾಲಮಿತಿಯಲ್ಲಿ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರೂ, ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಮುಂದಾಗಿದೆ. ಜೂನ್‌ 30ರ ಒಳಗೆ ಚುನಾವಣೆ ನಡೆಸಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಜೆಡಿಎಸ್‌ನ ಪ್ರತಿನಿಧಿಗಳು ಮನವಿ ಸಲ್ಲಿಸಿದ್ದರು’ ಎಂದು ಪತ್ರದಲ್ಲಿ ವಿವರಿಸಿದೆ.

‘ಮನವಿಯಲ್ಲಿ ಉಲ್ಲೇಖಿಸಲಾದ ವಿವರಗಳನ್ನು ಪರಿಶೀಲಿಸಲಾಗಿದೆ. ಜಿಬಿಎ ಪಾಲಿಕೆಗಳಿಗೆ ಜೂನ್‌ 30ರ ಒಳಗೆ ಚುನಾವಣೆ ನಡೆಸದೇ ಇದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವುದು ಮತ್ತು ಅಗತ್ಯ ಹಣಕಾಸನ್ನು ಒದಗಿಸುವುದು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ಕರ್ತವ್ಯ. ಚುನಾವಣೆ ನಡೆಸದೇ ಇದ್ದರೆ ಅದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳ ನಷ್ಟಕ್ಕೂ ಕಾರಣವಾಗುತ್ತದೆ’ ಎಂದಿದೆ.

‘ಚುನಾವಣೆ ನಡೆಸಲು ಅಗತ್ಯವಾದ ಸಿಬ್ಬಂದಿ ಮತ್ತು ಹಣಕಾಸನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳಿ’ ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.

ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ಅವರು ಈಚೆಗೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಬೇಗ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ಎಂದು ಮನವಿ ಮಾಡಿದ್ದರು.

Leave a Reply

Your email address will not be published. Required fields are marked *