Greater Bengaluru News9: ಸುಮಾರು 5 ವರ್ಷಗಳಿಂದ ಯಾವುದೇ ಚುನಾವಣೆ ಇಲ್ಲದೇ ಸೊರಗಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ( GBA Election ) ಕೊನೆಗೂ ಚುನಾವಣೆ ಸನ್ನಿಹಿತವಾಗಿದೆ. ಜೂನ್ 30ರ ಒಳಗೆ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಗಡುವು ನೀಡಿದೆ.
ಜಿಬಿಎ ಅಡಿಯಲ್ಲಿ ಬರುವ ಐದು ಪಾಲಿಕೆಗಳಿಗೆ ಜೂನ್ 30ರ ಒಳಗೆ ಚುನಾವಣೆ ಮುಗಿಸುವಂತೆ ರಾಜ್ಯ ಸರ್ಕಾರಕ್ಕೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಇಂದು ಸೂಚನೆ ನೀಡಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಶಶಿಕಿರನ್ ಶೆಟ್ಟಿ ಅವರು ರಾಜ್ಯ ಸರ್ಕಾರದ ತಮ್ಮ ವಾದ ಮಂಡನೆ ಮಾಡಿದರು. ಚುನಾವಣೆ ನಡೆಸಲು ಅಗತ್ಯವಾಗಿರುವ ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆ ಪ್ರಸ್ತುತ ಅಂತಿಮ ಹಂತದಲ್ಲಿದೆ. ಸದ್ಯ ಕರಡು ಮೀಸಲಾತಿ ಪಟ್ಟಿ ಬಿಡುಗಡೆಯಾಗಿದ್ದು, ಆಕ್ಷೇಪಣೆ ಸಲ್ಲಿಸಲು ಗಡುವು ನೀಡಲಾಗಿದೆ. ಫೆಬ್ರವರಿ 28ರೊಳಗೆ ಮೀಸಲಾತಿಯ ಅಂತಿಮ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ. ಮೀಸಲಾತಿ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಚುನಾವಣೆ ನಡೆಸುವ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗಕ್ಕೆ ಸೇರಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದೇ ವೇಳೆ ರಾಜ್ಯ ಚುನಾವಣಾ ಆಯೋಗ ಕೂಡ ತನ್ನ ವಾದ ಮಂಡಿಸಿತು. ಮಾರ್ಚ್ 16ರವರೆಗೆ ಮತದಾರರ ಪಟ್ಟಿಯ ಪರಿಶೀಲನೆ ನಡೆಯಲಿದೆ. ಇದರ ಬೆನ್ನಲ್ಲೇ ರಾಜ್ಯಾದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ನಡೆಯಲಿವೆ. ಈ ಸಮಯದಲ್ಲಿ ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಉಂಟಾಗಬಹುದು. ಹೀಗಾಗಿ ಚುನಾವಣೆ ನಡೆಸಲು ನಮಗೆ ಕಾಲಾವಕಾಶ ಬೇಕಿದೆ ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿತು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯ ಜೂನ್ 30ರ ಒಳಗೆ ಜಿಬಿಎ ಚುನಾವಣೆ ಮುಗಿಸುವಂತೆ ಸುಪ್ರೀಂ ಕೋರ್ಟ್‌ನ ಸಿಜೆಐ ಪೀಠವು ಗಡುವು ನೀಡಿತು.
ಅಂದಹಾಗೆ, ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ನಗರ, ಕಳೆದ ಐದು ವರ್ಷ ಹಾಗೂ ಮೂರು ತಿಂಗಳಿಂದ ತನ್ನ ಸ್ಥಳೀಯ ಆಡಳಿತದಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆಯೇ ನಡೆಯುತ್ತಿದೆ. 2020ರ ಸೆಪ್ಟೆಂಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅವಧಿ ಮುಗಿದ ನಂತರ, ಚುನಾವಣೆಗಳು ಮತ್ತೆ ಮತ್ತೆ ಮುಂದೂಡಿಕೆಯಾಗುತ್ತಲೇ ಬಂದಿತು. ಬಿಬಿಎಂಪಿಯ ಕೊನೆಯ ಚುನಾವಣೆ 2015ರಲ್ಲಿ ನಡೆದಿತ್ತು. ಅದರ ನಂತರ, ಚುನಾವಣೆಗಳನ್ನು ನಡೆಸುವಲ್ಲಿ ಸರ್ಕಾರಗಳು ವಿಫಲವಾಗಿವೆ.
ಚುನಾವಣೆ ನಡೆಸದಿರಲು ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ವಾರ್ಡ್‌ಗಳ ಪುನರ್‌ವಿಂಗಡನೆ (ಡೆಲಿಮಿಟೇಶನ್), ಮೀಸಲಾತಿ ನಿಗದಿ, ನ್ಯಾಯಾಲಯದ ಆದೇಶಗಳು ಮತ್ತು ರಾಜಕೀಯ ಲೆಕ್ಕಾಚಾರಗಳು ಕೂಡ ಸೇರಿವೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ‘ಬ್ರ್ಯಾಂಡ್ ಬೆಂಗಳೂರು’ ಕಮಿಟಿಯನ್ನು ಪುನರ್‌ರಚಿಸಿ, ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಆಕ್ಟ್ 2024 ಅನ್ನು ಜಾರಿಗೆ ತಂದರು. ಇದರ ಅಡಿ, 2025ರ ಮೇ 15ರಿಂದ ಐದು ಸ್ವತಂತ್ರ ಕಾರ್ಪೊರೇಷನ್‌ಗಳನ್ನು (ಸೆಂಟ್ರಲ್, ಈಸ್ಟ್, ವೆಸ್ಟ್, ಸೌತ್, ನಾರ್ತ್) ರಚಿಸಲಾಯಿತು, ಮತ್ತು ಒಟ್ಟು 369 ವಾರ್ಡ್‌ಗಳನ್ನು ನಿಗದಿಪಡಿಸಲಾಯಿತು. ಇದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ನೇಮಕ ಮಾಡಲಾಯಿತು.


