ಕೋಲಾರ: ಚಾಕೊಲೇಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ಚಾಕೊಲೇಟ್ ಅಂದ್ರೆ ಸಾಕು ಬಾಯಿ ಚಪ್ಪರಿಸ್ತಾರೆ. ಆದ್ರೆ ಈ ಸುದ್ದಿ ಓದಿದ್ರೆ ಚಾಕೋಲೇಟ್ ಇಷ್ಟ ಪಡೋರು, ತಿನ್ನೋಕು ಹಿಂದುಮುಂದು ನೋಡ್ತಾರೆ. ಯಾಕಂದ್ರೆ ಕರ್ನಾಟಕದ ಕೋಲಾರದಲ್ಲಿರೋ ಒಂದು ಅಂಗಡಿಯಿಂದ ಮಹಿಳೆಯೊಬ್ಬರು ಚಾಕೊಲೇಟ್ ತೆಗೆದುಕೊಂಡು ತಿನ್ನುತ್ತಿರ್ಬೇಕಾದ್ರೆ ಮನುಷ್ಯನ ಹಲ್ಲು ಸಿಕ್ಕಿದೆ. ಇದನ್ನು ನೋಡಿ ಮಹಿಳೆ ಗಾಬರಿಗೊಂಡಿದ್ದು ತಕ್ಷಣ ಫೋಟೋ ತೆಗೆದುಕೊಂಡು ಅಂಗಡಿ ಬಳಿ ಹೋಗಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಸ್ಥಳೀಯ ಗ್ರಾಹಕರಾದ ಭಾರತಮ್ಮ ಎಂಬುವವರು ಚಿಲ್ಲರೆ ಅಂಗಡಿಯೊಂದರಲ್ಲಿ ಖರೀದಿಸಿದ ಚಾಕೊಲೇಟ್‌ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಭಾರತಮ್ಮ ಎಂಬವರು ತಮ್ಮ ಮನೆಯ ಸಮೀಪದ ಚಿಲ್ಲರೆ ಅಂಗಡಿಯಲ್ಲಿ ಚಾಕೊಲೇಟ್ ಖರೀದಿಸಿದ್ದರು. ಚಾಕೊಲೇಟ್ ತಿನ್ನುವಾಗ ಅದರೊಳಗೆ ಗಟ್ಟಿಯಾದ ವಸ್ತುವೊಂದು ಕಾಣಿಸಿತು. ತಕ್ಷಣ ತೆಗೆದು ನೋಡಿದಾಗ ಅದು ಮನುಷ್ಯನ ಹಲ್ಲು ಎಂಬುದು ದೃಢಪಟ್ಟಿದೆ. ಈ ಘಟನೆಯಿಂದ ಗಾಬರಿಗೊಂಡ ಭಾರತಮ್ಮ, ತಕ್ಷಣ ಚಿಲ್ಲರೆ ಅಂಗಡಿಯ ಮಾಲೀಕರನ್ನು ಸಂಪರ್ಕಿಸಿದ್ದಾರೆ.
ಚಿಲ್ಲರೆ ಅಂಗಡಿಯ ಮಾಲೀಕ, ಈ ಚಾಕಲೇಟ್ ತಾವು ಖರೀದಿಸಿದ ಡಿಸ್ಟ್ರಿಬ್ಯೂಟರ್‌ನಿಂದ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ, ಚಾಕೊಲೇಟ್ ಯಾವ ಕಂಪನಿಯದ್ದು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. “ನಾವು ಡಿಸ್ಟ್ರಿಬ್ಯೂಟರ್ ಕೊಟ್ಟ ಚಾಕಲೇಟ್‌ಗಳನ್ನು ಮಾರಾಟ ಮಾಡಿದ್ದೇವೆ. ಇಂತಹ ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ,” ಎಂದು ಅಂಗಡಿಯ ಮಾಲೀಕರು ಹೇಳಿದ್ದಾರೆ.
ಚಾಕೊಲೇಟ್‌ನಲ್ಲಿ ಮನುಷ್ಯನ ಹಲ್ಲು ಕಂಡು ಭಾರತಮ್ಮ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. “ಚಾಕೊಲೇಟ್ ತಿನ್ನುವಾಗ ಇಂತಹ ಆತಂಕಕಾರಿ ವಸ್ತು ಕಾಣಿಸಿತು ಎಂದರೆ, ಇನ್ನು ಮಕ್ಕಳಿಗೆ ಏನು ತಿನ್ನಿಸಬೇಕು ಎಂಬ ಗೊಂದಲವಾಗಿದೆ,” ಎಂದು ಭಾರತಮ್ಮ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ನಮ್ಮ ನೇತಾ ನಮ್ಮ ರಿವ್ಯೂ ಕಾರ್ಡ್: ಬಹುತೇಕ ಶಾಸಕರ ಆದಾಯ ಹೆಚ್ಚಳ, ಮೊದಲ ಸ್ಥಾನದಲ್ಲಿ ಕೆ.ಗೋಪಾಲಯ್ಯ..!
ಜುಲೈ 1ರಿಂದ ಇ-ಖಾತಾ ಕಡ್ಡಾಯ: ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ


