Greater Bengaluru News9 : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಸೋಮವಾರ ದಾಳಿ ನಡೆಸಿ, ವಿವಿಧ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಚೂಪಾದ ಲೋಹದ ವಸ್ತುಗಳು, ತಂಬಾಕು ಉತ್ಪನ್ನಗಳು, ಬೆಳ್ಳಿಯ ಬಳೆ-ಚೈನ್, ಮೊಬೈಲ್ ಚಾರ್ಜರ್ ಹಾಗೂ ಮೊಬೈಲ್ ಬ್ಯಾಟರಿ, ₹9,340 ನಗದು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ. ಸಿಸಿಬಿ ಡಿಸಿಪಿ(ಕ್ರೈಂ -1) ನೇತೃತ್ವದಲ್ಲಿ ನಾಲ್ವರು ಎಸಿಪಿ, 13 ಇನ್‌ಸ್ಪೆಕ್ಟರ್, 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
‘ವಿಚಾರಣಾಧೀನ ಕೈದಿಗಳು, ಗಣ್ಯ ಆರೋಪಿಗಳಿದ್ದ ಬ್ಯಾರಕ್ ಹಾಗೂ ಮಹಿಳಾ ವಿಚಾರಣಾಧೀನ ಕೈದಿಗಳು, ಸಜಾ ಬಂದಿಗಳನ್ನು ಇರಿಸಲಾಗಿದ್ದ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಲಾಯಿತು. ಕೆಲವು ಬ್ಯಾರಕ್‌ಗಳಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಹಿಂದೆಯೂ ನಡೆದಿತ್ತು ದಾಳಿ: ಕಳೆದ ವರ್ಷದ ಜೂನ್‌ನಲ್ಲೂ ಸಿಸಿಬಿ ಪೊಲೀಸರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದರು. ಆಗಲೂ, ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್ ಗೋಲ್ಡ್, ಗಾಂಜಾ ಸೇದಲು ಕೈದಿಗಳು ಬಳಸುತ್ತಿದ್ದ ಕೊಳವೆಗಳು, ಚಾಕು, ಟ್ರಿಮ್ಮರ್, ಕತ್ತರಿ, ಮೊಬೈಲ್ ಚಾರ್ಜರ್, ಬೆಂಕಿ ಪೊಟ್ಟಣ, ಲೈಟರ್, ಪ್ಲೇ ಕಾರ್ಡ್ಸ್, ಪ್ಲೇ ಕಾರ್ಡ್‌ನ ಆಟದ ಬಳಿಕ ಸಂಖ್ಯೆ ಬರೆದುಕೊಳ್ಳಲು ಕೈದಿಗಳು ಉಪಯೋಗಿಸಿದ್ದ ಪುಸ್ತಕ, ಬಿಸಿ ನೀರು ಕಾಯಿಸುವ ಕಾಯಲ್, ಆಯುಧಗಳು, ಕಬ್ಬಿಣದ ರಾಡುಗಳು ಪತ್ತೆ ಆಗಿದ್ದವು ಎಂದು ಮೂಲಗಳು ಹೇಳಿವೆ.
ಕೈದಿಗಳ ಮೇಲೆ ಹಲ್ಲೆ
ರೌಡಿ ಬಿಕ್ಲು ಶಿವು ಕೊಲೆ ಪ್ರಕರಣದ ಆರೋಪಿ ಪ್ರದೀಪ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ. ‘ಫೆ.18ರಂದು ಸುರೇಶ್ ಹಾಗೂ ಆದಿತ್ ಮಧುಕಿರಣ್ ಎಂಬುವವರ ಮೇಲೆ ಪ್ರದೀಪ್ ಹಲ್ಲೆ ಮಾಡಿರುವ ಆರೋಪವಿದೆ. ಹಳೇ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ. ಸುರೇಶ್ ಮತ್ತು ಆದಿತ್ ಮಧುಕಿರಣ್ ಅವರ ಮೂಗು ಮತ್ತು ಕಪಾಳಕ್ಕೆ ಪ್ರದೀಪ್ ಹೊಡೆದಿದ್ದಾರೆ. ಈ ಸಂಬಂಧ ಎನ್‌ಸಿಆರ್ ದಾಖಲು ಮಾಡಲಾಗಿದೆ. ತನಿಖೆ ಪೂರ್ಣವಾಗಿ ಸತ್ಯಾಂಶ ಕಂಡುಬಂದರೆ ಎಫ್‌ಐಆರ್ ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.


