Greater Bengaluru News9 : ನಗರದ ನಿವಾಸಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಹತ್ವದ ಸಡಿಲಿಕೆ ಘೋಷಿಸಿದೆ. ಬಾಕಿ ಇರುವ ನೀರಿನ ಬಿಲ್ಗಳನ್ನು ತೆರವುಗೊಳಿಸಲು ಮೂರು ತಿಂಗಳ ಅವಧಿಗೆ ‘ಒನ್ ಟೈಮ್ ಸೆಟಲ್ಮೆಂಟ್’ (OTS) ಯೋಜನೆಯನ್ನು ಜಾರಿಗೆ ತರಲಾಗಿದೆ.
ಮಂಡಳಿಯ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ಏಪ್ರಿಲ್ನಿಂದ ಜೂನ್ವರೆಗೆ ಈ ಯೋಜನೆ ಅನ್ವಯವಾಗಲಿದೆ. ಪ್ರಸ್ತುತ ನೀರಿನ ಬಿಲ್ಗಳ ಜೊತೆ OTS ಸಂಬಂಧಿತ ನೋಟಿಸ್ಗಳನ್ನು ಗ್ರಾಹಕರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
BWSSB ವ್ಯಾಪ್ತಿಯಲ್ಲಿ ಸುಮಾರು 11 ಲಕ್ಷ ನೀರಿನ ಸಂಪರ್ಕಗಳಿದ್ದು, ಇದರಲ್ಲಿ 5.11 ಲಕ್ಷ ಗ್ರಾಹಕರಿಗೆ ಬಾಕಿ ಬಿಲ್ಗಳಿವೆ. ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು ಬಾಕಿ ಮೊತ್ತ ₹851.33 ಕೋಟಿ ಆಗಿದ್ದು, ಅದರಲ್ಲಿ ₹539.43 ಕೋಟಿ ಮೂಲ ಮೊತ್ತ ಹಾಗೂ ₹311.90 ಕೋಟಿ ಬಡ್ಡಿ ಸೇರಿದೆ.
ಈ ಯೋಜನೆಯಡಿ ಬಾಕಿದಾರರಿಗೆ ಬಡ್ಡಿಯಲ್ಲಿ ಸಡಿಲಿಕೆ ನೀಡಿ, ಮೂಲ ಮೊತ್ತವನ್ನು ಪಾವತಿಸುವ ಮೂಲಕ ಖಾತೆಗಳನ್ನು ಕ್ಲೀರ್ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಪಾವತಿಸಬೇಕಾದ ಅಂತಿಮ ಮೊತ್ತ, ಮನ್ನಾ ಮಾಡಲಾಗುವ ಬಡ್ಡಿ, ಪಾವತಿ ವಿಧಾನಗಳು ಸೇರಿದಂತೆ ಎಲ್ಲಾ ವಿವರಗಳನ್ನು ಬಿಲ್ ಜೊತೆ ಪ್ರತ್ಯೇಕ ಪತ್ರದಲ್ಲಿ ನೀಡಲಾಗುತ್ತದೆ. ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ BWSSB ಮನವಿ ಮಾಡಿದೆ.


