Greater Bengaluru News9 : ವಿದ್ಯುತ್ ಸಂಪರ್ಕ ಸಂಬಂಧ ನಿರಾಕ್ಷೇಪಣಾ ಪತ್ರ(ಎನ್ಒಸಿ) ನೀಡಲು 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಇಂಧನ ಸಚಿವ ಕೆ.ಜೆ.ಜಾರ್ಚ್ ಅವರ ವಿಶೇಷ ಕರ್ತವ್ಯ ಅಧಿಕಾರಿಯೂ ಆಗಿರುವ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿ ಇಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್, ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಜ್ಯೋತಿ ಪ್ರಕಾಶ್(50) ಮತ್ತು ಅವರ ಕಾರು ಚಾಲಕ ನವೀನ್(34) ಬಂಧಿತರು. ಬ್ಯಾಡರಹಳ್ಳಿ ಕೆಂಪೇಗೌಡ ನಗರ ನಿವಾಸಿ ಕೆ.ಎಂ. ಅನಂತರಾಜು ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುವ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ದೂರುದಾರ ಅನಂತರಾಜು ಹೊಸ ಕಟ್ಟಡ ನಿರ್ಮಾಣ ಮಾಡಿದ್ದು, ಆ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಎನ್ಒಸಿ ನೀಡಲು ಕೆಪಿಟಿಸಿಎಲ್ ಕಾರ್ಯ ನಿರ್ವಾಹಕ ಎಂಜಿನಿಯರ್ ಜ್ಯೋತಿ ಪ್ರಕಾಶ್ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ನಿರಾಕರಿಸಿದ ಅನಂತರಾಜು, ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಶನಿವಾರ ದೂರುದಾರರಿಂದ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


