BBMP
Loading ...

Police Bribe

ಬೆಂಗಳೂರು: ವಂಚನೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು 1 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ರಾಮಮೂರ್ತಿನಗರ ಪೊಲೀಸ್ ಠಾಣೆಯ ಪಿಐ, ಪಿಎಸ್‌ಐ ಮತ್ತು ಖಾಸಗಿ ವ್ಯಕ್ತಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣರಾಜಪುರದ ನಿವಾಸಿ ಗೋ‍ಪಿನಾಥ್ ಅವರ ಪತ್ನಿ, ಗೋಪಿನಾಥ್ ಅವರಿಗೆ ತಿಳಿಸದೆಯೇ ಕುಟುಂಬದ ಚಿನ್ನಾಭರಣ ಮತ್ತು ನಗದನ್ನು ಅನ್ಯರಿಗೆ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ, ಚಿನ್ನಾಭರಣವನ್ನು ವಾಪಸ್‌ ಕೊಡಿಸಿಕೊಡಿ ಎಂದು ಗೋಪಿನಾಥ್ ಅವರು ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದರು.

‘ಈ ದೂರಿನ ಅನ್ವಯ ಪ್ರಕರಣ ದಾಖಲಿಸಲು ಮತ್ತು ಚಿನ್ನಾಭರಣ ವಾಪಸ್‌ ಕೊಡಿಸಿಕೊಡಲು ₹2 ಲಕ್ಷ ಲಂಚ ನೀಡುವಂತೆ ಪಿಐ ರಾಜಶೇಖರ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

‘ಲೋಕಾಯುಕ್ತ ಎಸ್‌ಪಿ ಕೋನ ವಂಶಿಕೃಷ್ಣ ಅವರ ಮಾರ್ಗದರ್ಶನದಂತೆ, ದೂರುದಾರರು ರಾಮಮೂರ್ತಿನಗರ ಠಾಣೆಯ ಪಿಎಸ್‌ಐ ರುಮಾನ್‌ ಪಾಷಾ ಮತ್ತು ಅವರ ಆಪ್ತ ಇಮ್ರಾನ್ ಬಾಬು ಅವರಿಗೆ ₹1 ಲಕ್ಷ ಹಣ ನೀಡಿದ್ದರು. ಈ ವೇಳೆ ದಾಳಿ ನಡೆಸಿ ಆರೋಪಿಗಳಿಬ್ಬರನ್ನೂ ಬಂಧಿಸಲಾಯಿತು. ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಪಿಐ ರಾಜಶೇಖರ್ ಅವರನ್ನೂ ಬಂಧಿಸಲಾಯಿತು’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *