Greater Bengaluru News9 : ಖಾಕಿ ದಿರಿಸಿನ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ಮೂಲಕ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ವರದಿಯಾಗಿದೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಸಖರಾಯಪಟ್ಟಣ ಠಾಣೆಯ ಎಎಸ್ಐ ವೀರೇಂದ್ರ, ಸಮಾಜಘಾತಕ ಶಕ್ತಿಗಳಾದ ರೌಡಿ ಶೀಟರ್ಗಳ ಜೊತೆ ಕೈಜೋಡಿಸಿ ಮದ್ಯದ ಪಾರ್ಟಿ ನಡೆಸಿರುವುದು ಇಲಾಖೆಗೆ ಮತ್ತು ಸಮಾಜಕ್ಕೆ ಮಾಡಿದ ದೊಡ್ಡ ದ್ರೋಹವಾಗಿದೆ.
ರಕ್ಷಕರೇ ಭಕ್ಷಕರಾದರೆ ಜನಸಾಮಾನ್ಯರ ಪಾಡೇನು ಎನ್ನುವುದಕ್ಕೆ ಈ ಘಟನೆ ನೇರ ಉದಾಹರಣೆಯಾಗಿದೆ. ರಾತ್ರಿಯಿಡೀ ಜೋರಾಗಿ ಹಾಡುಗಳನ್ನು ಹಾಕಿಕೊಂಡು, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ರೌಡಿ ಶೀಟರ್ಗಳೊಂದಿಗೆ ಎಎಸ್ಐ ವೀರೇಂದ್ರ ಎಣ್ಣೆ ಪಾರ್ಟಿಯಲ್ಲಿ ಮೈಮರೆತಿದ್ದು ಆತ ವರ್ತಿಸಿದ ರೀತಿಗೆ ಧಿಕ್ಕಾರ ಕೂಗುವಂತಿದೆ. ಇಂತಹ ಕೃತ್ಯಗಳು ಪೊಲೀಸ್ ಇಲಾಖೆಯ ಘನತೆಯನ್ನು ಕುಗ್ಗಿಸುವುದಲ್ಲದೆ, ಜನಸಾಮಾನ್ಯರಲ್ಲಿ ಕಾನೂನಿನ ಮೇಲಿನ ನಂಬಿಕೆಯನ್ನೇ ಕಡಿತಗೊಳಿಸುತ್ತವೆ.
ಪೊಲೀಸ್ ಅಧಿಕಾರಿಯ ಈ ಅತಿರೇಕದ ವರ್ತನೆ ಹಾಗೂ ದರ್ಪವನ್ನು ಕಂಡು ಆಕ್ರೋಶಗೊಂಡ ಗ್ರಾಮಸ್ಥರು, ಬಾರ್ ಮುಂದೆ ರಾತ್ರೋರಾತ್ರಿ ಮುಗಿಬಿದ್ದು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಜನರ ಈ ಪ್ರತಿಭಟನೆಯು ರೌಡಿಗಳು ಮತ್ತು ಭ್ರಷ್ಟ ಪೊಲೀಸರ ಅನೈತಿಕ ಮೈತ್ರಿಗೆ ಬಿದ್ದ ತಕ್ಕೇಟಾಗಿದೆ. ಸಾರ್ವಜನಿಕರ ಈ ಕೆಂಗಣ್ಣು ಮತ್ತು ಎಎಸ್ಐ ವಿರುದ್ಧ ನಿರಂತರವಾಗಿ ಕೇಳಿಬರುತ್ತಿದ್ದ ಗಂಭೀರ ದೂರುಗಳೇ ಈ ಕಠಿಣ ಕ್ರಮಕ್ಕೆ ಮುಖ್ಯ ಕಾರಣವಾಗಿವೆ.
ವಿಷಯದ ಗಂಭೀರತೆಯನ್ನು ಅರಿತು ಎಚ್ಚೆತ್ತಿರುವ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು, ತಕ್ಷಣವೇ ಎಎಸ್ಐ ವೀರೇಂದ್ರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಲಾಖೆಯಲ್ಲಿ ಇಂತಹ ಕ್ರಿಮಿನಲ್ ಮತ್ತು ಶಿಸ್ತುಬಾಹಿರ ಚಟುವಟಿಕೆಗಳಿಗೆ ಯಾವುದೇ ಮುದಾಕ್ಷಿಣ್ಯವಿರುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಈ ಕ್ರಮ ಸಾರುತ್ತದೆ. ಸಮಾಜಘಾತಕ ಶಕ್ತಿಗಳ ಜೊತೆ ಕೈಜೋಡಿಸುವ ಕಳಂಕಿತ ಅಧಿಕಾರಿಗಳಿಗೆ ಈ ಅಮಾನತು ಕಠಿಣ ಎಚ್ಚರಿಕೆಯಾಗಬೇಕು.

