BBMP
Loading ...

KR Market

Greater Bengaluru News9 : ಕೆ.ಆರ್. ಮಾರ್ಕೆಟ್ (K R Market) ಮೇಲ್ಸೇತುವೆಯ ಚಾಮರಾಜಪೇಟೆ ತಿರುವಿನ ರಸ್ತೆ ಮುಂದಿನ ಮೂರು ತಿಂಗಳ ಕಾಲ ಬಂದ್ ಆಗಲಿದೆ. ಸುಲ್ತಾನ್ ರಸ್ತೆಯಲ್ಲಿ (Flyover) ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಮೇಲ್ಸೇತುವೆ ಮೂಲಕ ಪ್ರತಿದಿನ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಚಾಮರಾಜಪೇಟೆ, ಬಸವನಗುಡಿ ಸೇರಿದಂತೆ ಹಲವು ಭಾಗಗಳಿಗೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ರಸ್ತೆ ಬಂದ್ ಆಗಿರುವುದರಿಂದ ವಾಹನ ಸವಾರರು ಮಧ್ಯದಲ್ಲೇ ವಾಪಸ್ ತೆರಳಿ ಪರ್ಯಾಯ ಮಾರ್ಗ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂದಿನ ಕೆಲವು ತಿಂಗಳು ಈ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.

ಇದರ ನಡುವೆ ಕೆ.ಆರ್. ಮಾರ್ಕೆಟ್‌ನಲ್ಲಿ ಬೃಹತ್ ತೆರವು ಕಾರ್ಯಾಚರಣೆಯೂ ಆರಂಭವಾಗಿದೆ. ಜಿಬಿಎ (GBA) ಅಧಿಕಾರಿಗಳು ಪ್ಲೈಓವರ್ ಕೆಳಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಮೂರು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಯುತ್ತಿದ್ದು, ಸುಮಾರು 20ರಿಂದ 25 ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.

ತೆರವು ಕಾರ್ಯಾಚರಣೆಗೆ ಕೆಲ ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಆದರೆ, ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ವೇಳೆ ರಸ್ತೆ ಬಂದ್ ಮತ್ತು ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಕೆ.ಆರ್. ಮಾರ್ಕೆಟ್ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಭಾಗದಲ್ಲಿ ಸಂಚರಿಸುವವರು ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *