Greater Bengaluru News9 : ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಬಹು ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (BESCOM) ಮೊಬೈಲ್ (ಡಿಜಿಟಲ್) ಸೇವೆಗಳಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಏಪ್ರಿಲ್ 13ರ ಸೋಮವಾರವರೆಗೆ ‘ಬೆಸ್ಕಾಂ ಮಿತ್ರಾ’ ಮೊಬೈಲ್ ಅಪ್ಲಿಕೇಷನ್ನ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಈ ಆಪ್ ನೊಂದಿಗೆ ಸೇವೆ ಪಡೆಯುವ ಗ್ರಾಹಕರು ಮಂಗಳವಾರವರೆಗೂ ಕಾಯಬೇಕಿದೆ.
ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವ ಸದುದ್ದೇಶದಿಂದ ಬೆಸ್ಕಾಂ ಸಂಸ್ಥೆ ತನ್ನ ‘ಬೆಸ್ಕಾಂ ಮಿತ್ರಾ’ ಆ್ಯಪ್ನ ಉನ್ನತೀಕರಿಸಲು ಮುಂದಾಗಿದೆ. ಈ ಕಾರಣದಿಂದ ತಾತ್ಕಾಲಿಕ ಅಡಚಣೆಯಾಗುವ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಪ್ರಕಟಣೆಯ ಪ್ರಕಾರ, ಏಪ್ರಿಲ್ 11ರ ಬೆಳಗ್ಗೆ 10 ಗಂಟೆಯಿಂದಲೇ ಬಳಕೆ ಸ್ಥಗಿತವಾಗಿದ್ದು, ಏಪ್ರಿಲ್ 13 ರ ರಾತ್ರಿ 11:59 ರವರೆಗೆ, ಅಂದರೆ ಮೂರು ದಿನಗಳ ಕಾಲ ಈ ಅಪ್ಲಿಕೇಶನ್ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ಇನ್ನಿತರ ಪ್ರದೇಶಗಳ ಗ್ರಾಹಕರು ವಿದ್ಯುತ್ ಸಂಬಂಧಿತ ಸೇವೆಗಳಿಗಾಗಿ ‘ಬೆಸ್ಕಾಂ ಮಿತ್ರಾ’ ಆ್ಯಪ್ ಬಳಸುವಾಗ ತೊಂದರೆ ಅನುಭವಿಸಲಿದ್ದೀರಿ. ಇದರಲ್ಲಿ ವಿದ್ಯುತ್ ಬಿಲ್ ಪಾವತಿ, ದೂರುಗಳನ್ನು ನೋಂದಾಯಿಸುವುದು, ಸೇವಾ ವಿನಂತಿಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಬಳಕೆಯ ಇತಿಹಾಸವನ್ನು ವೀಕ್ಷಿಸುವುದರಂತಹ ಪ್ರಮುಖ ಸೇವೆಗಳು ಅಲಭ್ಯವಾಗಲಿವೆ. ಈ ಅಡಚಣೆಯು ಸಿಸ್ಟಮ್ ನವೀಕರಣದ ಭಾಗವಾಗಿದ್ದು, ಆ್ಯಪ್ ಮರುಸ್ಥಾಪನೆಯಾದ ನಂತರ ಸೇವೆಗಳು ಸುಧಾರಿಸುವ ಸಾಧ್ಯತೆ ಇದೆ.
ಆಪ್ ಸುಧಾರಿತ/ಸ್ಥಗಿತ ಅವಧಿಯಲ್ಲಿ ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದ್ದು, ಮಂಗಳವಾರವರೆಗೆ ಬಿಲ್ ಪಾವತಿ ಇನ್ನಿತರ ಸೇವೆಗೆ ಆಪ್ ಬಳಕೆ ನಿಲ್ಲಿಸಬೇಕು. ಬದಲಾಗಿ ಅಧಿಕೃತ ವೆಬ್ಸೈಟ್ನಂತಹ (https://www.bescom.co.in/) ಪರ್ಯಾಯ ಪ್ಲಾಟ್ಫಾರ್ಮ್ಗಳನ್ನು ಬಳಸುವಂತೆ ಕೋರಿಕೊಳ್ಳಲಾಗಿದೆ.
ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಿ, ತ್ವರಿತ ಪರಿಹರ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ #Bescom#WhatsappHelplinenumbers pic.twitter.com/5twH0GxQ4w
— Namma BESCOM | ನಮ್ಮ ಬೆಸ್ಕಾಂ (@NammaBESCOM) April 11, 2026
ಮೊಬೈಲ್ ಆ್ಯಪ್ ಮೂಲಕ ಏನೆಲ್ಲ ಮಾಡಲಾಗುತ್ತಿತ್ತೋ ಅದಕ್ಕಾಗಿ ಬೆಸ್ಕಾಂನ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡಲು ಪರ್ಯಾಯ ಮಾರ್ಗ ನೀಡಿದೆ. ಗ್ರಾಹಕರು ವಿದ್ಯುತ್ ಕಡಿತ, ದೋಷಯುಕ್ತ ಮಾರ್ಗಗಳು ಅಥವಾ ಇತರ ದೂರುಗಳ ಫೋಟೋ ಅಥವಾ ವೀಡಿಯೊಗಳನ್ನು ತಮ್ಮ ಜಿಲ್ಲೆಗಳಿಗೆ ನಿಗದಿಪಡಿಸಿದ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗಳಿಗೆ ನೇರವಾಗಿ ಕಳುಹಿಸಬಹುದು. ಆ್ಯಪ್ನ ತಾತ್ಕಾಲಿಕ ಸ್ಥಗಿತದ ನಂತರವು ಸೇವೆ ನೀಡುವುದನ್ನು ಬೆಸ್ಕಾಂ ಮುಂದುವರಿಸಿದೆ.
ತುರ್ತು ಸಹಾಯ ಅಥವಾ ಪ್ರಶ್ನೆಗಳಿಗಾಗಿ, ನಿವಾಸಿಗಳು ಬೆಸ್ಕಾಂ ಸಹಾಯವಾಣಿ 1912 ಅನ್ನು ಸಂಪರ್ಕಿಸಬಹುದು. ಅಡಚಣೆಯ ಅವಧಿಯಲ್ಲೂ ಈ ಸಂಖ್ಯೆ ಸಕ್ರಿಯವಾಗಿರುತ್ತದೆ. ಬೆಸ್ಕಾಂ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.
ಕೆಲವೇ ದಿನಗಳಲ್ಲಿ ನವೀಕೃತ ಬೆಸ್ಕಾಂ ಆ್ಯಪ್ನ ಉತ್ತಮ ಕಾರ್ಯಕ್ಷಮತೆ, ದಕ್ಷತೆ, ಬಳಕೆದಾರರ ಅನುಭವ ಮತ್ತು ಸೇವಾ ವಿತರಣೆಯನ್ನು ಸುಧಾರಿತ ಸೇವೆ ಒದಗಿಸಲಿದೆ. ತಾತ್ಕಾಲಿಕವಾಗಿ ತೊಂದರೆ ಆಗಿದ್ದರು, ಭವಿಷ್ಯದಲ್ಲಿ ಅತ್ಯಗತ್ಯ ಒಳ್ಳೆಯ ಸೇವೆ ಈ ಆಪ್ನಿಂದ ಲಭ್ಯವಾಗಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಲಕ್ಷಾಂತರ ವಿದ್ಯುತ್ ಗ್ರಾಹಕರಿಗೆ ಡಿಜಿಟಲ್ ಸೇವೆಗಳನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


