BBMP
Loading ...

BBMP

ಬೆಂಗಳೂರು ನಗರದಲ್ಲಿರುವ ಅಕ್ರಮ ಕಟ್ಟಡಗಳನ್ನು ಪತ್ತೆ ಮಾಡಲು ‘ಕೃತಕ ಬುದ್ಧಿಮತ್ತೆ (ಎಐ)’ ತಂತ್ರಜ್ಞಾನವನ್ನು ಬಳಸುವುದಾಗಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮನೆ ಬಾಗಿಲಿಗೆ ಉಚಿತವಾಗಿ ಖಾತೆಗಳನ್ನು ವಿತರಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

2025- 26 ನೇ ಸಾಲಿನ ಬಿಬಿಎಂಪಿ ಬಜೆಟ್ ಕುರಿತು ಬೆಂಗಳೂರು ನಗರದ ಶಾಸಕರ ಜತೆ ಸಭೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.

ನಗರದಲ್ಲಿ ಸುಮಾರು 7 ಲಕ್ಷ ಮನೆಗಳು ತೆರಿಗೆಯನ್ನು ಕಟ್ಟಿರಲಿಲ್ಲ. ಅವುಗಳಲ್ಲಿ ಕೇವಲ 1 ಲಕ್ಷ ಮನೆಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಬಂದಿವೆ. ಇನ್ನೂ 6 ಲಕ್ಷ ಮನೆಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು ಬಾಕಿ ಇದೆ. ಈ ಕಾರಣದಿಂದಾಗಿ, ಒಂದು ಬಾರಿ ಪಾವತಿಗೆ (ಓಟಿಎಸ್) ಅವಕಾಶವನ್ನು ನೀಡಲಾಗಿದೆ. ಅಕ್ರಮ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಪಾಲಿಕೆಗೆ ಇರಲಿಲ್ಲ. ಆದರೆ, ಕಳೆದ ವಾರ ಸದನದಲ್ಲಿ ಈ ಸಂಬಂಧ ವಿಧೇಯಕವನ್ನು ಅಂಗೀಕರಿಸಲಾಗಿದೆ. ಇದರ ಜೊತೆಗೆ, ಕಂದಾಯ ಬಡಾವಣೆಗಳಲ್ಲಿರುವ ಖಾಸಗಿ ರಸ್ತೆಗಳನ್ನು ಸಹ ಸರ್ಕಾರಿ ರಸ್ತೆಗಳೆಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.

ಎಐ ಮೂಲಕ ಅಕ್ರಮ ನಿರ್ಮಾಣಗಳ ಪತ್ತೆ
ನಗರದಲ್ಲಿ ಉತ್ತಮ ತೆರಿಗೆ ಸಂಗ್ರಹವಾಗುವುದು ಅತ್ಯಗತ್ಯ. ಇಲ್ಲಿನ ಜನರಿಗೆ ನೀರು, ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ. ಆದರೆ, ಅನೇಕ ಜನರು ಅದಕ್ಕೆ ತಕ್ಕಂತೆ ತೆರಿಗೆ ಪಾವತಿಸುತ್ತಿಲ್ಲ. ಕೆಲವರು ಅನುಮತಿ ನೀಡಿದ್ದಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಮತ್ತು ಹೆಚ್ಚು ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿದ್ದಾರೆ. ಇಂತಹ ಅಕ್ರಮಗಳನ್ನು ಪತ್ತೆಹಚ್ಚಲು ‘ಕೃತಕ ಬುದ್ಧಿಮತ್ತೆ (ಎಐ)’ ತಂತ್ರಜ್ಞಾನವನ್ನು ಬಳಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ತಂತ್ರಜ್ಞಾನದಿಂದ ಕಟ್ಟಡದ ವಿಸ್ತೀರ್ಣ ಮತ್ತು ಎತ್ತರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಜೊತೆಗೆ, ಪ್ರತಿಯೊಂದು ಮನೆಯ ದಾಖಲೆಗಳು ಲಭ್ಯವಾಗುತ್ತವೆ ಎಂದು ವಿವರಿಸಿದ್ದಾರೆ.

ಅಧಿಕಾರಿಗಳ ಅಕ್ರಮದಲ್ಲಿ ಶಾಮೀಲು ; ಅಮಾನತು ಮಾಡಿ
“ಮನೆ, ನಿವೇಶನ ಮಾಲೀಕರ ಜೊತೆ ಕೈ ಜೋಡಿಸಿ ಒಳ ಒಪ್ಪಂದ ಮಾಡಿಕೊಂಡು ಕಂದಾಯ ಬಡಾವಣೆ ಅಕ್ರಮಗಳಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಇಂತಹ ಅಧಿಕಾರಿಗಳನ್ನು ನನ್ನ ಗಮನಕ್ಕೆ ತರದೆ ತಕ್ಷಣ ಅಮಾನತು ಮಾಡಿ ಎಂದು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇತ್ತೀಚೆಗೆ ಅನೇಕ ದಂಡ ಶುಲ್ಕಗಳ ಮೊತ್ತವನ್ನು ಕೂಡ ಕಡಿಮೆ ಮಾಡಲಾಗಿದೆ. ನಗರದ ವ್ಯಾಪ್ತಿಯ ಎಲ್ಲಾ ಮನೆಗಳು ತೆರಿಗೆ ವ್ಯಾಪ್ತಿಗೆ ಬರಲೇಬೇಕು, ಅವರು ತೆರಿಗೆ ಕಟ್ಟಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ” ಎಂದು ತಿಳಿಸಿದರು. ಇದೇ ವೇಳೆ ಮನೆ ನಿರ್ಮಾಣ ವಿಚಾರದಲ್ಲಿ ಶೇ. 50 ರಷ್ಟು ಗುಂಪು ಮನೆಗಳು, ಶೇ. 50 ರಷ್ಟು ಒಂಟಿ ಮನೆಗಳು ಮಾಡಬೇಕು ಎನ್ನುವ ಸಲಹೆಯನ್ನು ಶಾಸಕರು ನೀಡಿದ್ದಾರೆ” ಎಂದು ಹೇಳಿದರು

ಮನೆ ಬಾಗಿಲಿಗೆ ಉಚಿತ ಖಾತೆ ಏಪ್ರಿಲ್ ನಿಂದ ಜಾರಿ
“ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ನೀಡುವ ವಿನೂತನ ವ್ಯವಸ್ಥೆಯನ್ನು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮಕ್ಕೆ ಏಪ್ರಿಲ್ ತಿಂಗಳಿನಿಂದ ಚಾಲನೆ ದೊರೆಯಲಿದೆ. ಪ್ರತಿಯೊಂದು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅಕಸ್ಮಾತ್ ತಪ್ಪಿಹೋಗಿದ್ದಲ್ಲಿ ಅಂತವರು ತಮ್ಮ ದಾಖಲೆಗಳನ್ನು ಮತ್ತೆ ನೀಡಬಹುದು ಎಂದರು.

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಗೆ ನೀಡುತ್ತಿರುವ ಅನುದಾನವನ್ನು 4 ಸಾವಿರ ಕೋಟಿ ರೂಪಾಯಿಯಿಂದ ಯಿಂದ 7 ಸಾವಿರ ಕೋಟಿಗೆ ಹೆಚ್ಚಳ ಮಾಡಿದೆ ಎಂಬ ಮಾಹಿತಿಯನ್ನು ನೀಡಿದರು.

ಸ್ಮಾರ್ಟ್​ ಮೀಟರ್​ ಹಗರಣ ಆರೋಪ: ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿಲು ತಡಕಾಡಿದ ಇಂಧನ ಸಚಿವ

Leave a Reply

Your email address will not be published. Required fields are marked *