BBMP
Loading ...

Seemanth

Greater Bengaluru News9 : ಪೊಲೀಸ್ ಇಲಾಖೆಯಲ್ಲಿ ಯಾವುದೇ ಹಂತದ ಅಧಿಕಾರಿ ಅಥವಾ ಸಿಬ್ಬಂದಿ ಅಶಿಸ್ತು ಮತ್ತು ಬೇಜವಾಬ್ದಾರಿತನ ತೋರಿದರೆ ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಕಡಕ್ ಎಚ್ಚರಿಕೆ ನೀಡಿದ್ದಾರೆ.

ಆಡುಗೋಡಿಯ ಸಿಎಆರ್ ದಕ್ಷಿಣ ಮೈದಾನದಲ್ಲಿ ನಡೆದ ಮಾಸಿಕ ಪರೇಡ್ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕರ್ತವ್ಯ ಲೋಪವೆಸಗುವವರನ್ನು ತಕ್ಷಣವೇ ಅಮಾನತು ಮಾಡಲಾಗುವುದು. ಈಗಾಗಲೇ ನಿಯಮ ಉಲ್ಲಂಘಿಸಿರುವ ಹಲವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

‘ನಮ್ಮ 112’ ತುರ್ತು ಸೇವೆಗೆ ಶ್ಲಾಘನೆ
ನಗರದ ತುರ್ತು ಸಹಾಯವಾಣಿ ‘ನಮ್ಮ 112’ ರ ಕಾರ್ಯವೈಖರಿಯನ್ನು ಆಯುಕ್ತರು ಮುಕ್ತಕಂಠದಿಂದ ಶ್ಲಾಘಿಸಿದರು. “ಹಿಂದೆ ಸಾರ್ವಜನಿಕರು ಕರೆ ಮಾಡಿದಾಗ ಪೊಲೀಸರು ಘಟನಾ ಸ್ಥಳಕ್ಕೆ ತಲುಪಲು ಸರಾಸರಿ 13 ನಿಮಿಷ ತಗಲುತ್ತಿತ್ತು. ಆದರೆ ಈಗ ಕೇವಲ 6 ನಿಮಿಷ 30 ಸೆಕೆಂಡ್‌ಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಬೆಂಗಳೂರಿನಂತಹ ಬೃಹತ್ ಮಹಾನಗರದಲ್ಲಿ ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ಸ್ಪಂದಿಸುತ್ತಿರುವುದು ಇಲಾಖೆಗೆ ಹೆಮ್ಮೆಯ ವಿಚಾರ,” ಎಂದರು.

ಮಾದಕ ಮುಕ್ತ ನಗರಕ್ಕಾಗಿ ‘ರೈಸ್’ ಹಾಗೂ ‘ಬೇಡ ಬ್ರೋ’ ಆಂದೋಲನ
ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಚಾಲನೆ ನೀಡಿರುವ ‘ರೈಸ್’ (RISE) ಮತ್ತು ‘ಬೇಡ ಬ್ರೋ’ ಜಾಗೃತಿ ಆಂದೋಲನಗಳಲ್ಲಿ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕಮಿಷನರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಎಲ್ಲರಿಗೂ ಅನ್ವಯ: ಸಂಚಾರಿ ವಿಭಾಗ, ಸಿಎಆರ್ ಸೇರಿದಂತೆ ಇಲಾಖೆಯ ಯಾವುದೇ ವಿಭಾಗವೂ ಇದರಿಂದ ಹೊರತಾಗಿಲ್ಲ. ಕಾನ್‌ಸ್ಟೇಬಲ್‌ನಿಂದ ಹಿಡಿದು ಕಮಿಷನರ್‌ವರೆಗೆ ಎಲ್ಲರೂ ಡ್ರಗ್ಸ್ ವಿರುದ್ಧ ಹೋರಾಡಬೇಕಿದೆ.

ತಕ್ಷಣದ ಕ್ರಮ: ನಗರದ 20 ಸಾವಿರ ಪೊಲೀಸ್ ಸಿಬ್ಬಂದಿಯೂ ಕರ್ತವ್ಯದ ವೇಳೆ ಎಲ್ಲೇ ಮಾದಕ ವಸ್ತುಗಳ ಮಾರಾಟ, ಸಾಗಣೆ ಅಥವಾ ಬಳಕೆ ಕಂಡುಬಂದರೂ ತಕ್ಷಣ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು.

ದೊಡ್ಡ ಬೇಟೆ: ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಪೊಲೀಸರು ಸಾರ್ವಜನಿಕರೊಂದಿಗೆ ಕೈಜೋಡಿಸಬೇಕು. ಕಳೆದ ಒಂದು ವರ್ಷದಲ್ಲಿ ಇಲಾಖೆಯು ಸುಮಾರು 350 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಈ ಕಾರ್ಯಾಚರಣೆ ಹೀಗೆಯೇ ಮುಂದುವರಿಯಲಿದೆ ಎಂದು ತಿಳಿಸಿದರು.

ಸಿಬ್ಬಂದಿ ಕಾರ್ಯವೈಖರಿಗೆ ಪ್ರಶಂಸೆ
ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗುವ ಸೂಕ್ಷ್ಮ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡಿರುವುದು ಶ್ಲಾಘನೀಯ ಎಂದ ಆಯುಕ್ತರು, ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲೂ ಇದೇ ರೀತಿಯ ಬಿಗಿ ಬಂದೋಬಸ್ತ್ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *