ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬಾರ್ & ರೆಸ್ಟೋರೆಂಟ್ ಮಾಲೀಕರ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದೆ. ಇನ್ಮುಂದೆ ಮಧ್ಯರಾತ್ರಿ 1 ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಿನಾದ್ಯಂತ ಈ ಹೊಸ ಆದೇಶ ಜಾರಿಯಾಗುತ್ತಿದೆ.
ಮಧ್ಯರಾತ್ರಿ 1 ಗಂಟೆವರೆಗೂ ಸಮಯಾವಕಾಶ ನೀಡುವಂತೆ ಕೋರಿ ಬೆಂಗಳೂರು ಸೇರಿ 10 ಮಹಾನಗರ ಪಾಲಿಕೆಗಳ ಹೋಟೆಲ್ ಮಾಲೀಕರು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ರಾಜಧಾನಿ ಬೆಂಗಳೂರಿಗೆ ಮಾತ್ರ ಮಧ್ಯರಾತ್ರಿ 1 ಗಂಟೆ ತನಕ ವಾಣಿಜ್ಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ) ಲಕ್ಷ್ಮೀ ಸಾಗರ್ ಅವರು ಈ ಆದೇಶ ನೀಡಿದ್ದಾರೆ.
ಇಂದು ಮಧ್ಯರಾತ್ರಿಯಿಂದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಆದೇಶ ಜಾರಿಯಾಗಿದ್ದು, ಇನ್ಮುಂದೆ ಬೆಳಗ್ಗೆ 6ರಿಂದ ಮಧ್ಯರಾತ್ರಿ 1ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಲಾಗಿದೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್ ಅವರು ಸರ್ಕಾರದ ಈ ಆದೇಶಕ್ಕೆ ಧನ್ಯವಾದ ತಿಳಿಸಿದ್ದಾರೆ.
CL 4 – ಕ್ಲಬ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)
CL 6 ( a) – ಸ್ಟಾರ್ ಹೋಟೆಲ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)
CL 7 – ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)
CL 7 ( D) ಎಸ್ಸಿ ಎಸ್ಟಿ ಮಾಲೀಕತ್ವದ ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್ (ಬೆಳಗ್ಗೆ 9 ರಿಂದ ಮಧ್ಯರಾತ್ರಿ 1)
CL 9 – ಬಾರ್ (ಬೆಳಗ್ಗೆ 10 ರಿಂದ ಮಧ್ಯರಾತ್ರಿ 1)


