BBMP
Loading ...

Khata

ಬೆಂಗಳೂರು: ಬಿಬಿಎಂಪಿ ವತಿಯಿಂದ ಸ್ವತ್ತುಗಳಿಗೆ ನೀಡಿರುವ ಎಲ್ಲ ಖಾತಾಗಳನ್ನು ಕಾನೂನು ಉದ್ದೇಶಗಳಿಗೆ ಅಧಿಕೃತ ಹಾಗೂ ಎ ಖಾತಾ ಆಸ್ತಿಗಳೆಂದು ಪರಿಗಣಿಸಲು ಅನುಮೋದನೆ ನೀಡಿ ಸರಕಾರ ಆದೇಶ ಹೊರಡಿಸಿದೆ.

ಜುಲೈ 17 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿಅನಧಿಕೃತ ಬಡಾವಣೆ, ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ‘ಬಿ’ ಖಾತಾ ಸ್ವತ್ತುಗಳಿಗೂ ‘ಎ’ ಖಾತಾ ಮಾನ್ಯತೆ ನೀಡಲಾಗಿದೆ.

ಯಾರಿಗೆಲ್ಲಾ ಖಾತಾ ಬದಲಾವಣೆಗೆ ಅವಕಾಶ?
ಸಾರ್ವಜನಿಕ ರಸ್ತೆಯೆಂದು ಘೋಷಿಸಲ್ಪಟ್ಟ ರಸ್ತೆಗಳಲ್ಲಿರುವ ಎಲ್ಲ ಸ್ವತ್ತುಗಳಿಗೆ ಎ ಖಾತಾ ಸಿಗಲಿದೆ. ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ-2024ರಡಿ ರಚಿಸುವ ಎಲ್ಲಹೊಸ ಮಹಾನಗರ ಪಾಲಿಕೆಗಳಿಗೂ ಹಾಗೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೂ ಈ ನಿಯಮವು ಅನ್ವಯಿಸಲಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಎ ಖಾತಾ ಸಿಗಬೇಕಾದರೆ ನಿಯಮಗಳೇನು?
* ನಿವೇಶನಕ್ಕೆ ಸಾರ್ವಜನಿಕ ರಸ್ತೆ ಸಂಪರ್ಕ ಕಡ್ಡಾಯವಾಗಿರಬೇಕು.
* ಒಂದು ವೇಳೆ ಖಾಸಗಿ ರಸ್ತೆ ಇದ್ದರೆ, ಅದನ್ನು ಗ್ರೇಟರ್‌ ಬೆಂಗಳೂರು ಕಾಯಿದೆ 2024ರ ಕಲಂ 212ರ ಅನ್ವಯ ಸಾರ್ವಜನಿಕ ರಸ್ತೆ ಎಂದು ಪರಿಗಣಿಸಲಾಗುತ್ತದೆ.
* ಕಂದಾಯ ಭೂಮಿಯಲ್ಲಿರುವ ಆಸ್ತಿಗಳು ಅನುಮೋದಿತ ಮಹಾಯೋಜನೆಯ ವ್ಯಾಪ್ತಿಯಲ್ಲಿದ್ದರೆ, ಭೂ ಪರಿವರ್ತನೆ ಅಗತ್ಯವಿಲ್ಲ. ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ, KTCP ಕಾಯಿದೆಯಡಿ ಅನುಮೋದನೆ ಪಡೆಯಬಹುದು.
* ಭೂ ಪರಿವರ್ತನೆ ಆಗಿದ್ದರೆ ಅಥವಾ ಹೊಸದಾಗಿ ಅನುಮೋದನೆ ಪಡೆದ ಖಾಲಿ ನಿವೇಶನಗಳಿಗೆ KTCP ಕಾಯಿದೆ 1961ರ ಕಲಂ 17ರ ಅಡಿ ಏಕ ನಿವೇಶನ ವಿನ್ಯಾಸ ನಕ್ಷೆ ಅಥವಾ ನಿವೇಶನ ಬಡಾವಣೆ ನಕ್ಷೆಗೆ ಅನುಮೋದನೆ ನೀಡಲಾಗುತ್ತದೆ.
* ಏಕ ನಿವೇಶನದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದರೆ ಬಿಬಿಎಂಪಿ ಕಾಯ್ದೆಗಳನ್ನು ಉಲ್ಲಂಘಿಸಿದರೆ, ಅಂತಹ ಆಸ್ತಿಗಳಿಗೆ ‘ಎ’ ಖಾತಾ ನೀಡಲು ಅವಕಾಶವಿದೆ. ಆದರೆ, ಏಕ ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ಪಡೆದು ಬಹುಮಹಡಿ ಕಟ್ಟಡ ನಿರ್ಮಿಸಿದರೆ, ಅಂತಹ ಆಸ್ತಿಗಳಿಗೆ ‘ಎ’ ಖಾತಾ ಸಿಗುವುದಿಲ್ಲ.
* ಭೂ ಪರಿವರ್ತನೆ ಆಗಿದ್ದರೆ ಅಥವಾ ಹೊಸದಾಗಿ ಅನುಮೋದನೆ ಪಡೆದ ಖಾಲಿ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿದರೆ, ಏಕ ವಿನ್ಯಾಸ ನಕ್ಷೆ ಅಥವಾ ಬಡಾವಣೆ ನಕ್ಷೆ ಪಡೆಯಬೇಕು. ನಂತರ ಖಾಲಿ ನಿವೇಶನಗಳಿಗೆ ‘ಎ’ ಖಾತಾ ನೀಡಲಾಗುತ್ತದೆ.
* ಬಹುಮಹಡಿ ಕಟ್ಟಡಗಳಿಗೆ ಅನುಮೋದನೆ ಪಡೆದಿದ್ದರೆ, ಸ್ವಾಧೀನಾನುಭವ ಪ್ರಮಾಣಪತ್ರ ನೀಡಿ ಪ್ರತಿ ಫ್ಲ್ಯಾಟ್‌ಗೆ ‘ಎ’ ಖಾತಾ ನೀಡಲಾಗುತ್ತದೆ. ಒಂದು ವೇಳೆ ಬಹುಮಹಡಿ ಕಟ್ಟಡಗಳು ಅನುಮೋದನೆ ಪಡೆಯದಿದ್ದರೆ, ಅಂತಹ ಫ್ಲ್ಯಾಟ್‌ಗಳಿಗೆ ಗ್ರೇಟರ್‌ ಬೆಂಗಳೂರು ಕಾಯ್ದೆಯಂತೆ ‘ಬಿ’ ಖಾತಾ ನೀಡಲಾಗುತ್ತದೆ.
* ಅಭಿವೃದ್ಧಿದಾರರು ಅಥವಾ ಕಟ್ಟಡ ಮಾಲೀಕರು 2024ರ ಸೆಪ್ಟೆಂಬರ್ 30ರ ಮೊದಲು ಫ್ಲ್ಯಾಟ್‌ಗಳನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದರೆ, ಮಾಲೀಕರ ಹೆಸರಿನಲ್ಲಿ ‘ಬಿ’ ಖಾತಾ ನೀಡಲಾಗುತ್ತದೆ. ಒಂದು ಅಥವಾ ಬಹು ಘಟಕಗಳಿಗೆ ಅಧಿಕೃತ ನೋಂದಾಯಿತ ಪತ್ರ ಹೊಂದಿದ್ದರೆ, ಆ ವ್ಯಕ್ತಿ ಫ್ಲ್ಯಾಟ್‌ಗಳ ನಿರ್ಮಾಣ ಪೂರ್ಣಗೊಳಿಸಿ, ಕಟ್ಟಡ ಮಂಜೂರಾತಿಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಬಹುದು. ಕಟ್ಟಡಕ್ಕೆ ಅನುಮೋದನೆ ದೊರೆತು ಸ್ವಾಧೀನಾನುಭವ ಪ್ರಮಾಣಪತ್ರ ಸಲ್ಲಿಸಿ ಪ್ರತಿ ಫ್ಲ್ಯಾಟ್‌ಗೆ ‘ಎ’ ಖಾತಾ ಪಡೆದುಕೊಳ್ಳಬಹುದು.

ಆಸ್ತಿ ಮಾಲಿಕರಿಗೆ ಸಿಹಿ ಸುದ್ದಿ; ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ಸರ್ಕಾರದಿಂದ ಅಧಿಕೃತ ಆದೇಶ

Leave a Reply

Your email address will not be published. Required fields are marked *