BBMP
Loading ...

Khameni

Greater Bengaluru News9 : ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಯಾಗಿರುವುದಾಗಿ ಯುಎಸ್​ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಣೆ ಮಾಡಿದ್ದಾರೆ. ಟ್ರಂಪ್​ ಮಾತ್ರವಲ್ಲದೆ, ಇರಾನ್​ ಮಾಧ್ಯಮಗಳು ಕೂಡ ವರದಿ ಮಾಡಿವೆ.

ಖಮೇನಿ ಅವರ ನಿವಾಸದ ಮೇಲೆ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಸುಧಾರಿತ ಕ್ಷಿಪಣಿಗಳನ್ನು ಉಡಾಯಿಸಿವೆ ಎಂದು ವರದಿಯಾಗಿದೆ. ಇಸ್ರೇಲಿ ಸೇನೆಯು ಸುಮಾರು 30 ಕ್ಷಿಪಣಿಗಳನ್ನು ಹಾರಿಸಿದ್ದು, ದಾಳಿಯಲ್ಲಿ ಖಮೇನಿ, ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಮೃತಪಟ್ಟಿದ್ದಾರೆಂದು ಇರಾನಿನ ಮಾಧ್ಯಮಗಳು ದೃಢಪಡಿಸಿವೆ.

ಇರಾನ್​ ರಾಜಧಾನಿ ತೆಹ್ರಾನ್​ನಲ್ಲಿರುವ ಖಮೇನಿ ಅವರ ಮನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಸರಣಿ ಬಾಂಬ್​ ದಾಳಿಯಲ್ಲಿ ಖಮೇನಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್​ನ ಸರ್ಕಾರಿ ಮಾಧ್ಯಮ ಚಾನೆಲ್​ -12 ವರದಿ ಮಾಡಿದೆ.​ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಖಮೇನಿ ಮೃತದೇಹವನ್ನು ಅವರ ಮನೆಯ ಅವಶೇಷಗಳ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಖಮೇನಿ ದೇಹವನ್ನು ವಶಕ್ಕೆ ಪಡೆದು, ಅದರ ಫೋಟೋ ಸಾಕ್ಷಿಯನ್ನು ಟ್ರಂಪ್​ಗೆ ಕಳುಹಿಸಿಕೊಡಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

ಖಮೇನಿಯವರ ಸಾವಿನ ಸುದ್ದಿ ತಿಳಿದಾಗಿನಿಂದ, ಇರಾನ್‌ನ ಅಧಿಕೃತ ಸುದ್ದಿ ವಾಹಿನಿ ‘IRINN’ ಭಾರವಾದ ಹೃದಯದಿಂದ ಸುದ್ದಿಯನ್ನು ಪ್ರಸಾರ ಮಾಡುತ್ತಿದೆ. ಟಿವಿ ಪರದೆಯ ಮೇಲ್ಭಾಗದಲ್ಲಿ ಕಪ್ಪು ಬ್ಯಾನರ್ ಪ್ರದರ್ಶಿಸಲಾಗುತ್ತದೆ ಮತ್ತು ಖಮೇನಿಯವರ ಭಾವಚಿತ್ರಗಳ ಹಿನ್ನೆಲೆಯಲ್ಲಿ ಕುರಾನ್ ಪಠಿಸಲಾಗುತ್ತದೆ. ಖಮೇನಿಯವರ ನಿಧನದಿಂದ ಇರಾನಿನ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ ಎಂದು ವರದಿ ಮಾಡಲಾಗುತ್ತಿದೆ.

ಇರಾನ್​ನಿಂದಲೂ ಅಧಿಕೃತ ಘೋಷಣೆ
ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ನಿಧನವನ್ನು ಇರಾನ್ ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ, 40 ದಿನಗಳ ಶೋಕಾಚರಣೆಯನ್ನು ಸಹ ಘೋಷಣೆ ಮಾಡಿದೆ. ಮತ್ತೊಂದೆಡೆ, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಸಾವಿಗೀಡಾಗಿದ್ದಕ್ಕೆ ಇರಾನ್‌ನಲ್ಲಿ ಪ್ರತಿಭಟನಾಕಾರರು ದೊಡ್ಡ ಪ್ರಮಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಇರಾನ್‌ನ ಹಲವಾರು ನಗರಗಳಲ್ಲಿ ಜನರು ಹರ್ಷೋದ್ಗಾರದಿಂದ ಶಿಳ್ಳೆ ಹೊಡೆಯುತ್ತಾ ಆಚರಿಸುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ.

ಇರಾನ್‌ನ ಉಪನಗರ ಬೀಸಾತ್ ಟೌನ್‌ನಲ್ಲಿ ಜನರು ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಫಾಕ್ಸ್ ನ್ಯೂಸ್ ಪೋಸ್ಟ್ ಮಾಡಿದೆ. ಖಮೇನಿ ಅವರ ಸಾವಿನ ಸುದ್ದಿ ಕೇಳಿದ ಇರಾನಿನ ಮಹಿಳೆಯರು ಹಿಜಾಬ್ ಇಲ್ಲದೆ ಬೀದಿಗಳಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಇಸ್ರೇಲಿ ಮಾಜಿ ವಕ್ತಾರ ಎಲಾನ್ ಲೆವಿ ಹಂಚಿಕೊಂಡಿದ್ದಾರೆ.

ಇಸ್ರೇಲ್ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೆ, ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್ ಗಾರ್ಡ್ಸ್ ಕಮಾಂಡರ್ ಪಕ್ಸೌರ್ ಸಹ ಮೃತಪಟ್ಟಿದ್ದಾರೆ. ಒಟ್ಟು ಏಳು ಹಿರಿಯ ಅಧಿಕಾರಿಗಳು ಸಾವಿಗೀಡಾಗಿದ್ದಾರೆ. ಐಎಎಫ್ ಫೈಟರ್ ಜೆಟ್‌ಗಳು ಇರಾನ್‌ನಾದ್ಯಂತ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಿವೆ ಎಂದು ಇಸ್ರೇಲ್ ಘೋಷಿಸಿದೆ. ಇರಾನ್ ರಕ್ಷಣಾ ನಾಯಕತ್ವದ ಏಳು ಹಿರಿಯ ಅಧಿಕಾರಿಗಳಾದ ಅಲಿ ಶಮ್ಖಾನಿ, ಮೊಹಮ್ಮದ್ ಪಕ್ಪೂರ್, ಸಲೇಹ್ ಅಸಾದಿ, ಮೊಹಮ್ಮದ್ ಶಿರಾಜಿ, ಅಜೀಜ್ ನಾಸಿರ್ಜಾದೆ, ಹೊಸೇನ್ ಜಬಲ್ ಅಮೇಲಿಯನ್ ಮತ್ತು ರೆಜಾ ಮೊಜಾಫರಿ-ನಿಮಾಯಾ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ವಾಯುಪಡೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *