ಬೆಂಗಳೂರಿನ ಜೀವನಾಡಿಯಾಗಿದ್ದ ನಮ್ಮ ಮೆಟ್ರೋ ಇದೀಗ ಬೆಲೆ ಏರಿಕೆ ಶಾಕ್‌ನಿಂದ ಸಿಲಿಕಾನ್ ಸಿಟಿ ಮಂದಿಯ ಕೋಪಕ್ಕೆ ಗುರಿಯಾಗಿದೆ. ಜನರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ಏರಿದ್ದ ದರವನ್ನು ಅಲ್ಪವಷ್ಟೇ ಇಳಿಸಿದ್ದರೂ ಕೋಪ ತಣ್ಣಗಾಗಲಿಲ್ಲ. ಇಲ್ಲಿವರೆಗೆ ನೆಮ್ಮದಿಯ ಪ್ರಯಾಣಕ್ಕಾಗಿ ಮೆಟ್ರೋ ಹತ್ತುತ್ತಿದ್ದವರು ಇದೀಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಮತ್ತೊಂದು ಸಮಸ್ಯೆ ಹುಟ್ಟಿಕೊಂಡಿದೆ.
ಮೊದಲೆಲ್ಲ ಮೆಟ್ರೋ ಟಿಕೆಟ್ ಕೈಗೆಟುಕುವ ದರದಲ್ಲಿ ಇದ್ದಿದ್ದರಿಂದ ಎಲ್ಲರೂ ಬೆಂಗಳೂರಿನ ಟ್ರಾಫಿಕ್‌ಗೆ ಹೆದರಿ ಮೆಟ್ರೋ ರೈಲು ಹತ್ತುತ್ತಿದ್ದರು. ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಹಲವು ಪ್ರದೇಶಗಳನ್ನು ತಲುಪಬಹುದು ಎನ್ನುವ ಕಾರಣಕ್ಕೂ ಮೆಟ್ರೋ ಮೊರೆ ಹೋಗುತ್ತಿದ್ದರು. ಆದರೆ ದರ ಏರಿಕೆ ಬಿಸಿ ತಟ್ಟಿದ ಹಿನ್ನೆಲೆ ಮೆಟ್ರೋ ಗುಡ್‌ಬೈ ಹೇಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಪೆಟ್ರೋಲ್, ಡೀಸೆಲ್ ದರಗಳು ಕೂಡ ಗಗನಕ್ಕೇರಿರುವುದರಿಂದ ಇದಕ್ಕೆ ಹೋಲಿಸಿದರೆ ಮೆಟ್ರೋ ಟಿಕೆಟ್ ದರ ಕಡಿಮೆ ಇದೆ ಎಂದು ಕೆಲಸಗಳಿಗೆ ಹೋಗುವವರು ಕೂಡ ಪ್ರತಿನಿತ್ಯ ಮೆಟ್ರೋದಲ್ಲೇ ಸಂಚರಿಸುತ್ತಿದ್ದರು. ಸದ್ಯ ಪರಿಷ್ಕೃತ ದರವನ್ನು ಕಂಡು ಬೆಂಗಳೂರು ಮಂದಿ ಶಾಕ್ ಆಗಿದ್ದಾರೆ. ಈ ದುಬಾರಿ ಪ್ರಯಾಣ ಮಾಡುವ ಬದಲು ಸ್ವಂತ ವಾಹನದಲ್ಲೇ ಓಡಾಡುವುದು ಒಳ್ಳೆಯದು ಎನ್ನುತ್ತಿದ್ದಾರಂತೆ.
ಈ ಹಿಂದೆ ಬಿಎಂಟಿಸಿ ಹಾಗೂ ಆಟೋಗಳಲ್ಲಿ ಸಂಚರಿಸುತ್ತಿದ್ದವರೂ ಮೆಟ್ರೋ ಬಂದ ನಂತರ ಅದನ್ನೇ ಅವಲಂಬಿಸಿದ್ದರು. ಹಣ ಉಳಿತಾಯದ ಉದ್ದೇಶಕ್ಕೆ ಮೆಟ್ರೋವನ್ನು ಎಲ್ಲರೂ ಮೆಚ್ಚಿದ್ದರು. ಅಲ್ಲದೆ ಕೆಲವರು ತಮಗೆ ಹತ್ತಿರವಿರುವ ಮೆಟ್ರೋ ನಿಲ್ದಾಣಗಳಲ್ಲಿ ತಮ್ಮ ಸ್ವಂತ ವಾಹನಗಳನ್ನು ಪಾರ್ಕ್ ಮಾಡಿ ಅಲ್ಲಿಂದ ತಮಗೆ ಬೇಕಾದ ಸ್ಥಳಗಳಿಗೆ ಮೆಟ್ರೋದಲ್ಲಿ ಸಂಚರಿಸುತ್ತಿದ್ದರು.
ಈಗ ದುಬಾರಿ ಟಿಕೆಟ್ ದರ ಇರುವುದರಿಂದ ಮೆಟ್ರೋಗೆ ಸಾಷ್ಟಾಂಗ ನಮಸ್ಕಾರ ಹಾಕಿ ಸ್ವಂತ ಬೈಕ್, ಸ್ಕೂಟರ್ ಹಾಗೂ ಕಾರುಗಳಲ್ಲೇ ಸಂಚರಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ವಾಹನಗಳ ಸಂಖ್ಯೆ ಕೂಡ ತಗ್ಗಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ.
ಹೆಚ್ಚಾಯ್ತು ಟ್ರಾಫಿಕ್ ಜಾಮ್: ಮೆಟ್ರೋಗೆ ಗುಡ್‌ಬೈ ಹೇಳಿ ಸ್ವಂತ ವಾಹನಗಳನ್ನು ಬಳಸುವವರು ಹೆಚ್ಚಾದ ಕಾರಣ ಬೆಂಗಳೂರಿನ ರಸ್ತೆಗಳಿಗೆ ವಾಹನಗಳು ಹೆಚ್ಚಾಗಿ ಇಳಿಯುತ್ತಿವೆ. ಇದರಿಂದ ಈಗಾಗಲೇ ತಲೆನೋವಾಗಿರುವ ಟ್ರಾಫಿಕ್ ಜಾಮ್ ಕೂಡ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಹಾಗೂ ಮೆಟ್ರೋ ಟಿಕೆಟ್ ದರಗಳನ್ನು ಸೇರಿಸಿದರೆ ಅದೇ ದುಡ್ಡಿಗೆ ಸ್ವಂತ ವಾಹನದಲ್ಲೇ ನೆಮ್ಮದಿಯಾಗಿ ಪ್ರಯಾಣಿಸಬಹುದು ಎಂದು ಯೋಚಿಸತೊಡಗಿದ್ದಾರೆ. ಬೆಂಗಳೂರು ಟ್ರಾಫಿಕ್‌ಗೆ ಪರಿಹಾರವಾಗಿದ್ದ ನಮ್ಮ ಮೆಟ್ರೋ ಈಗ ಟಿಕೆಟ್ ದರ ಏರಿಸಿ ಮತ್ತೆ ಟ್ರಾಫಿಕ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬೆಂಗಳೂರಿಗರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಟಿಕೆಟ್ ದರ ಸ್ವಲ್ಪವೇ ಇಳಿಸಿದ್ದರೂ ಇದಕ್ಕೆ ಪ್ರಯಾಣಿಕರ ಸಮ್ಮತಿ ಇಲ್ಲ. ಹೀಗಾಗಿ ಮೆಟ್ರೋಗೆ ಸೆಡ್ಡು ಹೊಡೆದು ಸ್ವಂತ ವಾಹನಗಳನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ.
ಮಕ್ಕಳಿಗೆ ಗೇಮ್ ಆಡಲು ಮೊಬೈಲ್ ಕೊಡುವ ಎಲ್ಲಾ ಪೋಷಕರೇ ಎಚ್ಚರ: ಶಾಕಿಂಗ್ ವಿಡಿಯೋ ವೈರಲ್


