Greater Bengaluru News9 : ಮುನಿಸಿಕೊಂಡು ತವರಿಗೆ ಹೋಗಿದ್ದ ಪತ್ನಿಯನ್ನು ಮರಳಿ ಮನೆಗೆ ಕರೆತರಲು ಅತ್ತೆ ಮನೆಗೆ ಹೋದ ವ್ಯಕ್ತಿಯೊಬ್ಬನಿಗೆ ಆಕೆಯ ಸಹೋದರನೇ ಪೆಟ್ರೋಲ್ ಸುರಿದು ಬೆಂಕಿ(Fire) ಹಚ್ಚಿರುವ ಭೀಕರ ಘಟನೆ ಪಂಜಾಬ್ನ ತರಣ್ ಜಿಲ್ಲೆಯಲ್ಲಿ ನಡೆದಿದೆ. ಈ ಘೋರ ಕೃತ್ಯದಲ್ಲಿ ಬೆಂಕಿ ಹಚ್ಚಲ್ಪಟ್ಟ ಪತಿ ಹಾಗೂ ಆತನನ್ನು ರಕ್ಷಿಸಲು ಹೋದ ಮಹಿಳೆಯಿಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಲಿಯಾದವರನ್ನು ಲವ್ಪ್ರೀತ್ ಸಿಂಗ್ ಮತ್ತು ಗುರ್ಜಿತ್ ಕೌರ್ ಎಂದು ಗುರುತಿಸಲಾಗಿದೆ.
ನಡೆದಿದ್ದೇನು? ಲವ್ಪ್ರೀತ್ ಸಿಂಗ್ ಅವರ ಪತ್ನಿ ಸಂದೀಪ್ ಕೌರ್ ಕೆಲ ದಿನಗಳಿಂದ ಮುನಿಸಿಕೊಂಡು ತಾಯಿ ಮನೆಗೆ ಹೋಗಿ ಉಳಿದುಕೊಂಡಿದ್ದರು. ಜೂನ್ 13 ರಂದು ಲವ್ಪ್ರೀತ್ ಸಿಂಗ್ ಪತ್ನಿಯ ಮನವೊಲಿಸಿ ಮನೆಗೆ ಕರೆದೊಯ್ಯಲು ಅತ್ತೆಯ ಮನೆಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಸಂದೀಪ್ ಕೌರ್ ಸಹೋದರ ಸಜನ್ ಸಿಂಗ್, ಬಾವ ಲವ್ಪ್ರೀತ್ ಸಿಂಗ್ ಮೇಲೆ ದಹನಕಾರಿ ವಸ್ತುವನ್ನು ಸುರಿದು ದಿಢೀರನೆ ಬೆಂಕಿ ಹಚ್ಚಿದ್ದಾನೆ.
ರಕ್ಷಿಸಲು ಹೋದ ಮಹಿಳೆಯೂ ಸಾವು ಲವ್ಪ್ರೀತ್ ಸಿಂಗ್ ಒದ್ದಾಡುತ್ತಾ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ್ದನ್ನು ನೋಡಿ, ಸಜನ್ ಸಿಂಗ್ ಅವರ ಅತ್ತಿಗೆ ಗುರ್ಜಿತ್ ಕೌರ್ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅವರಿಗೂ ಭೀಕರವಾಗಿ ಸುಟ್ಟ ಗಾಯಗಳಾಗಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಲವ್ಪ್ರೀತ್ ಮತ್ತು ಗುರ್ಜಿತ್ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಆರೋಪಿ ಸಜನ್ ಸಿಂಗ್ಗೂ ಸುಟ್ಟ ಗಾಯಗಳಾಗಿದ್ದು, ಆತನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ ಈ ಘಟನೆಯ ಮೈ ಜುಂ ಎನಿಸುವ ಸಿಸಿಟಿವಿ (CCTV) ದೃಶ್ಯಾವಳಿಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ. ವೀಡಿಯೊದಲ್ಲಿ ವ್ಯಕ್ತಿಯೊಬ್ಬನಿಗೆ ದಿಢೀರನೆ ಬೆಂಕಿ ಹಚ್ಚುವುದು, ಆತ ಪ್ರಾಣಭಯದಿಂದ ಬೆಂಕಿ ನಂದಿಸಲು ಓಡುವುದು ಮತ್ತು ಆತನನ್ನು ರಕ್ಷಿಸಲು ಹೋದ ಮಹಿಳೆಯ ಮೈಗೂ ಬೆಂಕಿ ಹೊತ್ತಿಕೊಂಡು ಇಬ್ಬರೂ ಕಿರುಚಾಡುತ್ತಾ ಓಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಆರೋಪಿ ಸಜನ್ ಸಿಂಗ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
This incident took place in Tarn Taran, where a man allegedly set his own brother-in-law on fire, killing him. During the incident, the accused's sister-in-law, who tried to intervene and stop the attack, also suffered severe burns and lost her life.
— SARCASTIC (@S0rcastic) July 4, 2026
Tell me, should someone… pic.twitter.com/XG6HT6LRy7


