ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಕುರಿತು ತಾಜಾ ಮಾಹಿತಿಯೊಂದು ಹೊರಬಿದ್ದಿದೆ. ದರ್ಶನ್ ನಡೆ ಜೈಲಿನ ಅಧಿಕಾರಿಗಳಿಗೆ ತಲೆನೋವು ತಂದಿದೆ. ಇದೇ ರೀತಿ ಮುಂದುವರಿದರೆ ದಚ್ಚು ಆರೋಗ್ಯಕ್ಕೆ ಅಪಾಯ ಎದುರಾಗುವ ಸಾಧ್ಯತೆಯೂ ಇದೆ. ಅಷ್ಟಕ್ಕೂ ದಾಸನಿಗೆ ಏನಾಗಿದೆ ಎಂಬುದನ್ನು ನಾವೀಗ ತಿಳಿಯೋಣ.
ಕಳೆದ 26 ದಿನಗಳಿಂದ ದರ್ಶನ್ ಜೈಲಿನಲ್ಲಿದ್ದಾರೆ. ಅಂದಿನಿಂದ ಅವರು ಸರಿಯಾಗಿ ಊಟ ಮಾಡುತ್ತಿಲ್ಲವಂತೆ. ಅಲ್ಲದೆ, ದರ್ಶನ್ ಅವರಿಗೆ ಜೈಲಿನ ಊಟ ಕೊಂಚವೂ ಇಷ್ಟವಿಲ್ಲವಂತೆ. ಸರಿಯಾಗಿ ಊಟ ಮಾಡದ ಪರಿಣಾಮ ನಟ ದರ್ಶನ್ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆಂದು ಜೈಲಿನ ಮೂಲಗಳು ತಿಳಿಸಿವೆ.
ದರ್ಶನ್ ಬಂಧನವಾದಾಗ 107 ಕೆಜಿ ತೂಕವಿದ್ದರು. ಇದೀಗ 97 ಕೆಜಿಗೆ ಇಳಿದಿದ್ದಾರೆ. ಇದೇ ರೀತಿ ತೂಕ ಇಳಿಕೆಯಾದರೆ ಆರೋಗ್ಯಕ್ಕೆ ತೊಂದರೆಯಾಗಲಿದೆ. ದರ್ಶನ್ ಅವರು ಜೈಲಿನಲ್ಲಿ ಒಬ್ಬಂಟಿಯಾಗಿದ್ದು, ಯಾರೊಂದಿಗೂ ಮಾತನಾಡಲು ಇಷ್ಟಪಡುತ್ತಿಲ್ಲ ಮತ್ತು ಕಾಲಕಾಲಕ್ಕೆ ದರ್ಶನ್ ಅವರ ಆರೋಗ್ಯ ಸಂಬಂಧಿ ಪರೀಕ್ಷೆಗಳು ನಡೆಯುತ್ತಿವೆ ಎಂಬ ಮಾಹಿತಿ ಸಿಗುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್ ಬೇಗ ಗುಣಮುಖರಾಗಿ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲಿ ಎಂದು ಅವರ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದರ ನಡುವೆ ಈ ಪ್ರಕರಣದಿಂದ ದರ್ಶನ್ ಹೊರಬರುವುದು ಅಷ್ಟು ಸುಲಭವಲ್ಲ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ದರ್ಶನ್ ಅವರ ನ್ಯಾಯಾಂಗ ಬಂಧನವನ್ನು ಇದೇ ಜುಲೈ 18ರವರೆಗೆ ವಿಸ್ತರಿಸಲಾಗಿದೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಎಂದು ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಪರ ಧ್ವನಿ ಎತ್ತುತ್ತಿದ್ದಾರೆ. ಇನ್ನು ಈ ಪ್ರಕರಣದಿಂದ ದರ್ಶನ್ ಕೆರಿಯರ್ ಕೂಡ ಅಪಾಯದಲ್ಲಿದೆ. ದರ್ಶನ್ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿರುವ ಪ್ರಾಜೆಕ್ಟ್ಗಳ ಸ್ಟೇಟಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವುದು ಗಮನಾರ್ಹ. ಈ ವಿವಾದಗಳಿಂದ ದರ್ಶನ್ ಹೊರಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ದರ್ಶನ್ ಅವರನ್ನು ಬೆಂಬಲಿಸುತ್ತಿರುವ ಕೆಲ ಸೆಲೆಬ್ರಿಟಿಗಳ ವಿರುದ್ಧವು ಆಕ್ರೋಶ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ದರ್ಶನ್ ತೂಕ ಇಳಿಕೆ ಜೈಲಿನ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇದೇ ರೀತಿ ತೂಕ ಇಳಿದರೆ ದರ್ಶನ್ ಪ್ರಾಣಕ್ಕೇ ಅಪಾಯ ಎಂಬ ಕಾಮೆಂಟ್ಗಳು ಬರುತ್ತಿವೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಕರೆಂಟ್ ಕಂಬದಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ನಿಂದ ಕಾರ್ಮಿಕನ ಸ್ಥಿತಿ ಗಂಭೀರ


