ಬೆಂಗಳೂರು: ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಉಪವಿಭಾಗ ಮತ್ತು ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕ ಸಲಹಾ ಸಮಿತಿ ರಚಿಸುವ ಬಗ್ಗೆ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ನೇತೃತ್ವದಲ್ಲಿ ಇಂದು (ಜೂನ್ 19) ಸಭೆ ನಡೆಸಲಾಯಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರಿ ಆದೇಶಗಳಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಪವಿಭಾಗ ಹಾಗು ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕ ವರ್ಗಗಳ ಪ್ರತಿನಿಧಿಗಳನ್ನೊಳಗೊಂಡಂತೆ ಗ್ರಾಹಕ ಸಲಹಾ ಸಮಿತಿಯನ್ನು ರಚಿಸುವಂತ ಆದೇಶಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ 10ನೇ ಉತ್ತರ ಉಪವಿಭಾಗ ಮತ್ತು ಕಲ್ಯಾಣನಗರ & ಪಟ್ಟೇಗಾರಪಾಳ್ಯ ಕಾರ್ಯ ಮತ್ತು ಪಾಲನಾ ಘಟಕ ವ್ಯಾಪ್ತಿಯಲ್ಲಿ ಕೆಳಕಂಡ ಸದಸ್ಯರನ್ನು ಮತ್ತು ಪ್ರತಿನಿಧಿಗಳನ್ನು ಒಳಗೊಂಡಂತೆ ಗ್ರಾಹಕ ಸಲಹಾ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ಕಾರ್ಯನಿರ್ವಹಣೆಗೆ ಮಾರ್ಗಸೂಚಿಗಳು:
01. ಉಪವಿಭಾಗ ಮಟ್ಟದ ಸಮಿತಿಯ ಕನಿಷ್ಟ 3 ತಿಂಗಳಿಗೊಮ್ಮೆ ಹಾಗೂ ಶಾಖಾ ಕಛೇರಿ ಮಟ್ಟದ ಸಮಿತಿಯು ಕನಿಷ್ಟ 02 ತಿಂಗಳಿಗೊಮ್ಮೆ ಸಭೆ ನಡೆಸುವುದು.
02. ಸಮಿತಿಯು ವಿದ್ಯುತ್ ಸರಬರಾಜು ಸೇವೆ ಸಂಬಂಧವಾಗಿ ಸಾರ್ವಜನಿಕರು ಗ್ರಾಹಕರಿಂದ ಅಹವಾಲು ಸಲಹೆ ಸೂಚನೆಗಳನ್ನು ಸ್ವೀಕರಿಸುವುದು.
03. ಗ್ರಾಹಕರಿಗೆ ನೀಡುತ್ತಿರುವ ಸೇವೆಯನ್ನು ಮತ್ತಷ್ಟು ಉತ್ತಮ ಪಡಿಸಲು ಸ್ವೀಕರಿಸಿದ ಅಹವಾಲು, ಸಲಹೆ ಸೂಚನೆಗಳ ಬಗ್ಗೆ ಚರ್ಚೆ ನಡೆಸಿ, ಅಂತಹ ಅಂಶಗಳನ್ನು ದೈನಂದಿನ ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಳ್ಳುವುದು.
04. ವಿದ್ಯುತ್ ಕಳ್ಳತನ, ದುರ್ಬಳಕೆ, ಅನಧಿಕೃತ ಬಳಕೆ ಇಂತಹ ಕಾನೂನುಬಾಹಿರ ಪ್ರಕರಣಗಳ ಬಗ್ಗೆ ಗ್ರಾಹಕರು ಸಮಿತಿಯ ಗಮನಕ್ಕೆ ತರುವಂತೆ ತಿಳಿಸುವುದು.
05. ಸಲಹೆ ಸೂಚನೆಗಳ ರೂಪದಲ್ಲಿ ಸ್ವೀಕರಿಸಿದ ಅತ್ಯಮೂಲ್ಯ ಅಂಶಗಳನ್ನು ನಡವಳಿ ರೂಪದಲ್ಲಿ ಆಯಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಇವರಿಗೆ ಸಲ್ಲಿಸುವುದು.
06. ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗಳು(ವಿ) ಅವರವರ ವ್ಯಾಪ್ತಿಗೆ ಒಳಪಡುವ ಸಮಿತಿಗಳ ನಡವಳಿಗಳನ್ನು ಕ್ರೋಢೀಕರಿಸಿ ಕೂಡಲೇ ವೃತ್ತ ಮುಖ್ಯಸ್ಥರ ಮೂಲಕ ವಲಯ ಮುಖ್ಯಸ್ಥರಿಗೆ ಸಲ್ಲಿಸುವುದು.
07. ವಲಯದ ಮುಖ್ಯಸ್ಥರು ವಿಭಾಗಗಳಿಂದ ಸ್ವೀಕರಿಸಿದ ವರದಿಗಳನ್ನು ಹಾಗೂ ಕೈಗೊಂಡ ಕ್ರಮಗಳನ್ನು ಸೂಕ್ತವಾಗಿ ಪರಿಶೀಲಿಸಿ ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳ ನಿಗಮ ಕಛೇರಿಗೆ 07 ದಿನಗಳಲ್ಲಿ ಸಲ್ಲಿಸುವುದು.
08. ವಿದ್ಯುತ್ ಸರಬರಾಜು ಕಂಪನಿಗಳ ನಿಗಮ ಕಛೇರಿಯಲ್ಲಿ ಸ್ವೀಕೃತವಾದ ವರದಿಗಳನ್ನು ಅವಲೋಕಿಸಿ, ನಿಯಾಮಾನುಸಾರ ವಹಿಸಿರುವ ಕ್ರಮದ ಬಗ್ಗೆ ಸರ್ಕಾರಕ್ಕೆ 07 ದಿನಗಳಲ್ಲಿ ವರದಿ ಸಲ್ಲಿಸುವುದು.
ಷರತ್ತುಗಳು:
01. ಸಮಿತಿಯ ಸದಸ್ಯರು ಯಾವುದೇ ಎತಿಯ ಭತ್ಯೆ, ಸಂಭಾವನೆ ಹಾಗೂ ಯಾವುದೇ ವಾಹನ ಸೌಕರ್ಯದ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ.
02. ಮಾನ್ಯ ವಿಧಾನಸಭಾ ಸದಸ್ಯರ ಸಹಮತಿಯಿಂದ ಯಾವುದೇ ಸದಸ್ಯರನ್ನು ಪೂರ್ವ ಸೂಚನೆಯಿಲ್ಲದೆ ಅನರ್ಹಗೊಳಿಸುವ ಅಧಿಕಾರವನ್ನು ವಿದ್ಯುತ್ ಸರಬರಾಜು ಕಂಪನಿಗಳು ಹೊಂದಿರುತ್ತವೆ;
03. ಸಮಿತಿ ಸದಸ್ಯರು ಶಾಖಾ ಮತ್ತು ಉಪವಿಭಾಗ ಮಟ್ಟದ ಕಛೇರಿಗಳ ಕಾರ್ಯಪಾಲನೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ,
04. ಕಾರಣಾಂತರಿಗಳಿಂದ ಸಲಹಾ ಸಮಿತಿಯ ಯಾವೊಬ್ಬ ಸದಸ್ಯ / ಸದಸ್ಯೆ ಗೈರು ಹಾಜರಾದಲ್ಲಿ ಅಂತಹ ಸದಸ್ಯತ್ವ ಸ್ಥಾನಕ್ಕೆ ಸಂಬಂಧಪಟ್ಟ ಪ್ರವರ್ಗದ ಸದಸ್ಯ / ಸದಸ್ಯರನ್ನು ಮಾನ್ಯ ಶಾಸಕರ ಸಹಮತಿಯೊಂದಿಗೆ ವಿದ್ಯುತ್ ಸರಬರಾಜು ಕಂಪನಿಗಳೇ ನೇಮಿಸಿಕೊಳ್ಳಬಹುದಾಗಿದೆ.
05. ಗ್ರಾಹಕರ ಸಲಹಾ ಸಮಿತಿಯು ವಿತರಣಾ ಕಂಪನಿಗಳು ಮತ್ತು ಗ್ರಾಹಕರೊಡನೆ ಉತ್ತಮ ಬಾಂಧವ್ಯ ಸುಗಮ ಕೆಲಸ ಕಾರ್ಯಗಳ ನಿರ್ವಹಣೆ ಹಾಗೂ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶ ಹೊಂದಿರುತ್ತದೆ. ಆದ್ದರಿಂದ ಈ ಕೆಳಕಂಡಂತೆ ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಲಾಗಿರುತ್ತದೆ.




