BBMP
Loading ...

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಬಂಧನ ಆಗಿರೋದು ನಿಮಗೆ ಗೊತ್ತೇ ಇದೆ. ಮಂಗಳವಾರ ಬೆಳಗ್ಗೆ ಮೈಸೂರಿನಲ್ಲಿ ದರ್ಶನ್‌ ಬಂಧನವಾದ ಬಳಿಕ ಆ ಸುದ್ದಿ ಮಿಂಚಿನಂತೆ ಜಗತ್ತಿನಾದ್ಯಂತ ವ್ಯಾಪಿಸಿತು. ಆಗ ರಾಜಕಾರಣಿಗಳು, ಪೊಲೀಸರು ಮತ್ತು ಸಾರ್ವಜನಿಕರು ಸೇರಿ ಎಲ್ಲರ ತಲೆಯಲ್ಲಿ ಕಾಡಿದ್ದು ಒಂದೇ ಒಂದು ಪ್ರಶ್ನೆ. ಯಾರಪ್ಪ ಆ ಪೊಲೀಸು. ದರ್ಶನ್ ಅಂತಹ ಸೆಲೆಬ್ರಿಟಿಯನ್ನೇ ಅರೆಸ್ಟ್‌ ಮಾಡಿದಂಥ ಆ ಅಧಿಕಾರಿ ಯಾರು? ಈ ಒಂದು ಮಿಲಿಯನ್‌ ಡಾಲರ್‌ ಪ್ರಶ್ನೆ ಈಗಲೂ ಬಹಳಷ್ಟು ಜನರನ್ನು ಕಾಡ್ತಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ದರ್ಶನ್‌ ಅಂತಹ ಸೆಲೆಬ್ರಿಟಿಯನ್ನು, ಬಹಳ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ ನಾಯಕ ನಟನನ್ನು ಅರೆಸ್ಟ್‌ ಮಾಡೋದಂದ್ರೆ ಸುಮ್ಮನೇ ಅಲ್ಲ. ಅಂತಹ ಕೆಲಸವನ್ನು ಮಾಡಿದ್ದು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಅಂದ್ರೇ ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌ ಎಸ್‌ ಗಿರೀಶ್‌ ಅವರು. ಏನಾದ್ರೂ ಒಂದಿಷ್ಟು ಲೆಕ್ಕಾಚಾರ ತಪ್ಪಿದ್ರೂ ಅವರ ಕೆಲಸಕ್ಕಷ್ಟೇ ಅಲ್ಲ, ಅವರ ಜೀವನಕ್ಕೂ ಕುತ್ತು ಬರ್ತಿತ್ತು. ಅಂತದ್ರಲ್ಲೂ ಯಾವುದೇ ಹಿಂದೇಟು ಹಾಕದೇ ಎಲ್ಲ ಆರಂಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಒಂದಿಷ್ಟು ಮಾಹಿತಿಯು ಸೋರಿಕೆ ಆಗದಂತೆ ದರ್ಶನ್‌ ಅನ್ನು ಬಂಧಿಸುವಲ್ಲಿ ಗಿರೀಶ್‌ ಮತ್ತು ತಂಡ ಯಶಸ್ವಿಯಾಗಿತ್ತು.

ಗಿರೀಶ್‌ ಅಂತಹ ಡೈನಾಮಿಕ್‌ ಅಧಿಕಾರಿ ಇಲ್ಲದಿದ್ದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣ ಹುಟ್ಟಿದಲ್ಲೇ ಸತ್ತು ಹೋಗ್ತಿತ್ತು. ಕೊಲೆ ಆರೋಪದಲ್ಲಿ ಪ್ರಭಾವಿ ಸಿನಿಮಾ ನಟನಿಗೆ ಕೋಳ ತೊಡಿಸಲು ಎರಡು ಗುಂಡಿಗೆ ಬೇಕು ಅಂತಾ ಸ್ವತಃ ಹಿರಿಯ ಐಪಿಎಸ್‌ ಅಧಿಕಾರಿಗಳೇ ಮಾತನಾಡ್ತಿದ್ದಾರೆ. ಗಿರೀಶ್‌ ಕುಮಾರ್‌ ಅವರಿಗೆ ವಿಜಯನಗರದ ಎಸಿಪಿ ಚಂದನ್‌ ಕುಮಾರ್‌ ಸಾಥ್‌ ನೀಡಿದರು. ಇವರಿಗೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಬೆಂಬಲವಾಗಿ ನಿಂತಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೆಲ್ಲದರ ನಡುವೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಸಿ ಗಿರೀಶ್​ ನಾಯ್ಕ್​ ಅವರ ಪಾತ್ರವೂ ದೊಡ್ಡದು. ಎಫ್​ಐಆರ್​ ದಾಖಲಿಸಿ ಪ್ರಕರಣಕ್ಕೆ ಮುಂದಡಿ ಇಟ್ಟಿದ್ದೇ ಗಿರೀಶ್​ ನಾಯಕ್​ ಅವರು. ಇದೀಗ ಅವರನ್ನು ವರ್ಗಾವಣೆ ಮಾಡಿದ್ದು, ಆ ಜಾಗಕ್ಕೆ ನಿಷ್ಠಾವಂತ ಅಧಿಕಾರಿ ನಾಗೇಶ್​ ಅವರನ್ನು ಕೂರಿಸಲಾಗಿದೆ. ಅಂದಹಾಗೆ ಗಿರೀಶ್​ ನಾಯ್ಕ್​ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ಕಾಮಾಕ್ಷಿ ಪಾಳ್ಯ ಪೊಲೀಸ್​ ಠಾಣೆಗೆ ವರ್ಗಾಯಿಸಲಾಗಿತ್ತು.

ಬಿಎಸ್‌ ಯಡಿಯೂರಪ್ಪರನ್ನು ಬಂಧಿಸಿದ್ದ ಎಸ್‌ ಗಿರೀಶ್‌!
ಗಿರೀಶ್‌ ಮತ್ತು ಚಂದನ್‌ ಇಬ್ಬರು ಕೂಡ ಅನೇಕ ಯುವ ಪೊಲೀಸರಿಗೆ ರಿಯಲ್‌ ಹೀರೋಗಳು.. ಯಾಕಂದ್ರೇ ಇವರಿಬ್ಬರು ಎಷ್ಟೇ ಒತ್ತಡ ಬಂದರು ಕೂಡ ತಮ್ಮ ಕೆಲಸದಿಂದ ಹಿಂದೆ ಸರಿಯದೇ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾರೆ. ಪ್ರಮುಖವಾಗಿ ನಾವು ಎಸ್‌ ಗಿರೀಶ್‌ ಯಾರು ಎಂಬುದನ್ನು ನೋಡೋಕೆ ಹೋದರೆ, ಒಂದು ದೊಡ್ಡ ಘಟನೆಯೇ ನಮ್ಮ ಮುಂದೆ ಬರುತ್ತೆ. 2011ರಲ್ಲಿ ಕರ್ನಾಟಕದ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಿದ್ದು ಕೂಡ ಇದೇ ಎಸ್‌ ಗಿರೀಶ್‌ ಎಂಬುದು ನಿಮಗೆ ನೆನಪಿರಲಿ.

ಇಂಜಿನಿಯರ್‌ ಆಗಿ ಬಳಿಕ ಪೊಲೀಸ್‌ ಅಧಿಕಾರಿಯಾಗಿರುವ ಎಸ್‌ ಗಿರೀಶ್‌ ಅವರು ಈ ಹಿಂದೆ ಲೋಕಾಯುಕ್ತದಲ್ಲಿದ್ದಾಗ ತಮ್ಮ ನೇರ ಹಾಗೂ ಧೈರ್ಯದ ನಡವಳಿಕೆಗೆ ಹೆಸರಾಗಿದ್ದರು. ಆಗ ದೊಡ್ಡ ದೊಡ್ಡ ಅಧಿಕಾರಿಗಳು, ಕಾರ್ಪೊರೇಟರ್‌ಗಳನ್ನು ಕಂಬಿ ಹಿಂದೆ ಹಾಕಿದ ಖ್ಯಾತಿ ಎಸ್‌ ಗಿರೀಶ್‌ ಅವರದ್ದು. ಇನ್ನು, ಚಂದನ್‌ ಕುಮಾರ್‌ ಅವರು ಮೊದಲು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದರು. ಅದಾದ ಬಳಿಕ ಪೊಲೀಸ್‌ ಅಧಿಕಾರಿಯಾದ ಅವರಿಗೆ ಪೊಲೀಸ್‌ ಇಲಾಖೆಯಲ್ಲಿ ದೊಡ್ಡ ಹೆಸರಿದ್ದು, ಕೇಸ್‌ಗಳನ್ನು ಲಾಜಿಕಲ್‌ ಎಂಡ್‌ಗೆ ತೆಗೆದುಕೊಂಡು ಹೋಗ್ತಾರೆ ಅಂತಾ ಎಲ್ಲರೂ ಹೇಳ್ತಾರೆ.

ಡಿಸಿಪಿ ಗಿರೀಶ್‌ ಅವತ್ತು ಸ್ಟೇಷನ್‌ನಲ್ಲಿ ಇಲ್ಲದಿದ್ರೆ ಸ್ಟೋರಿನೇ ಬೇರೆ ಆಗಿರ್ತಿತ್ತು!
ಎಸ್‌ ಗಿರೀಶ್‌ ಅವರು ಅವತ್ತು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಇಲ್ಲದಿದ್ದರೇ ಈ ಕೇಸ್‌ ಧಮ್‌ ಕಳೆದುಕೊಳ್ತಿತ್ತು. ರೇಣುಕಾಸ್ವಾಮಿ ಶವ ಸಿಗುತ್ತಲೇ ನಾಲ್ಕು ಮಂದಿ ನಾವೇ ಕೊಲೆ ಮಾಡಿದ್ದು ಅಂತಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಅವರ ಹೇಳಿದ ಕಾಗಕ್ಕ, ಗುಬ್ಬಕ್ಕನ ಕಥೆಯನ್ನು ಆ ಸ್ಟೇಷನ್‌ನ ಪೊಲೀಸ್‌ ಅಧಿಕಾರಿಗಳು ನಂಬಿ, ಕೇಸ್‌ ಅನ್ನು ಅಲ್ಲಿಯೇ ಕ್ಲೋಸ್‌ ಮಾಡಲು ಮುಂದಾಗಿದ್ದರು.

ಆ ವೇಳೆ ಈ ಕೇಸ್‌ಗೆ ಎಂಟ್ರಿ ಕೊಟ್ಟಿದ್ದೇ ಡಿಸಿಪಿ ಎಸ್‌ ಗಿರೀಶ್‌. ಶರಣಾದ ನಾಲ್ವರು ಹೇಳಿದ ಕಥೆ ಗಿರೀಶ್‌ ಅವರಿಗೆ ಅನುಮಾನ ಬಂತು. ನಾಲ್ವರ ಹೇಳಿಕೆಗಳು ತದ್ವಿರುದ್ಧ ಆಗಿದ್ದವು. ಆಗ ಡಿಸಿಪಿ ಎಸ್ ಗಿರೀಶ್ ಮತ್ತು‌ ಎಸಿಪಿ ಚಂದನ್ ಕುಮಾರ್‌ ಇಬ್ಬರು ಸೇರಿಕೊಂಡು ಶರಣಾದ ನಾಲ್ವರಿಗೆ ತಮ್ಮದೇ ರೀತಿಯಲ್ಲಿ ವರ್ಕ್‌ ಮಾಡಿದ್ದಾರೆ. ಆಗ ಇವರಿಗೂ ರೇಣುಕಾಸ್ವಾಮಿಗೂ ಸಂಬಂಧ ಇಲ್ಲ. ಕೇವಲ ಜೈಲಿಗೆ ಹೋಗಲು ಇವರಿಗೆ ಹಣದ ಆಮಿಷ ಒಡ್ಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಎಸ್‌ ಗಿರೀಶ್‌ ಅವರು ಆರೋಪಿಗಳ ಮುಂದೆ ನೆಕ್ಸ್ಟ್‌ ಇಟ್ಟ ಪ್ರಶ್ನೆಯೇ ಹಣ ಕೊಟ್ಟವರು ಯಾರು? ಅಂತಾ. ಆಗ ಆರ್‌ಆರ್‌ ನಗರದ ರೆಸ್ಟೋರೆಂಟ್‌ ಮಾಲೀಕ ವಿನಯ್ ವಿ ಅವರ ಹೆಸರು ಬಯಲಿಗೆ ಬಂದಿದೆ. ಆತನನ್ನು ಎತ್ತಾಕೊಂಡು ಬರೋದಕ್ಕೆ ಪೊಲೀಸರು ಜಾಸ್ತಿ ಟೈಂ ತಗೋಳ್ಲಿಲ್ಲ.

ಅದಲ್ಲದೇ ಆರೋಪಿಗಳಲ್ಲಿ ಒಬ್ಬ ಕಾಮಾಕ್ಷಿಪಾಳ್ಯ ಎಸ್‌ಐಗೆ ಫೋನ್‌ ಮಾಡಿ ಶರಣಾಗೋದು ಹೇಗೆ? ಅದರ ಪ್ರಕ್ರಿಯೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಎಂಬುದು ವಿಚಾರಣೆ ವೇಳೆ ಗಿರೀಶ್‌ ಹಾಗೂ ಚಂದನ್‌ ಅವರಿಗೆ ಗೊತ್ತಾಗಿದೆ. ನಟ ದರ್ಶನ್‌ ಆಪ್ತ ಸಹಾಯಕನಾಗಿರುವ ವಿನಯ್‌, ನಟನ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಕಿಡ್ನಾಪ್‌ ಮಾಡಿ, ಆತನನ್ನು ಆರ್‌ಆರ್‌ ನಗರದ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದು, ಅದಾದ್ಮೇಲೆ ಏನೇನಾಯ್ತು ಎಂಬುದನ್ನು ಬಾಯಿ ಬಿಟ್ಟಿದ್ದಾನೆ. ಜೊತೆಗೆ ದರ್ಶನ್‌ ಗೆಳತಿ ಪವಿತ್ರಾಗೌಡಗೆ ಬಂದಿದ್ದ ಅಶ್ಲೀಲ ಕಮೆಂಟ್‌ಗಳ ಬಗ್ಗೆಯೂ ವಿನಯ್‌ ಬಾಯಿಬಿಟ್ಟಿದ್ದು, ಅದಕ್ಕೆ ಈ ರೀತಿ ಆಯ್ತು ಎಂದು ಕೂಡ ಹೇಳಿದ್ದ. ಚಿತ್ರಹಿಂಸೆ ನೀಡುವಾಗ ಯಾರ‍್ಯಾರು ಇದ್ದರು ಎಂಬುದನ್ನು ಕೂಡ ಆತ ಹೇಳಿದ್ದ. ಅದಾದ ಬಳಿಕ ಶವ ಸಿಕ್ಕ ಸ್ಥಳದಲ್ಲಿ, ಶೆಡ್‌ ಬಳಿಕ ಸ್ಕಾರ್ಪಿಯೋ ಕಾರಿನ ಜೊತೆಗೆ ದರ್ಶನ್‌ ಬಳಸುತ್ತಿದ್ದ ಕೆಂಪು ಬಣ್ಣದ ಜೀಪ್‌ ರಾಂಗ್ಲರ್‌ ಓಡಾಡಿದ ಸಿಸಿಟಿವಿ ವಿಡಿಯೋಗಳನ್ನು ವಶಕ್ಕೆ ಪಡೆದು, ಕೇಸ್‌ ಅನ್ನು ಮತ್ತಷ್ಟು ಸ್ಟ್ರಾಂಗ್‌ ಮಾಡಿದ್ದಾರೆ.

ನಟ ದರ್ಶನ್‌ ಬಂಧನಕ್ಕೆ ರಾತ್ರೋ ರಾತ್ರಿ ನಡೆದಿತ್ತು ಸಿಕ್ರೇಟ್‌ ಪ್ಲಾನ್‌!
ಇದೆಲ್ಲಾ ಆಯ್ತು.. ನಟ ದರ್ಶನ್‌ ಈ ಕೊಲೆಯಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಪೊಲೀಸರು ಮನದಟ್ಟು ಮಾಡಿಕೊಂಡ್ರು. ಅದಾದ್ಮೇಲೆ ಸ್ಯಾಂಡಲ್‌ವುಡ್‌ ಸುಲ್ತಾನ್‌ ಅನ್ನು ಬಂಧಿಸಬೇಕಿತ್ತು. ಅವರಿಗಿರೋ ಸ್ಟಾರ್‌ಡಮ್‌ ಮತ್ತು ರಾಜಕಾರಣಿಗಳ ಜೊತೆ ಇದ್ದ ಸಂಬಂಧವನ್ನು ಗಮನಿಸಿದರೆ ಅವರನ್ನು ಅರೆಸ್ಟ್‌ ಮಾಡೋದು ಸಾಧ್ಯವೇ ಇಲ್ಲ ಅಂತಾ ಸ್ವತಃ ಪೊಲೀಸ್‌ ಇಲಾಖೆಯಲ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಎಸ್‌ ಗಿರೀಶ್ ಅವರು ಎಲ್ಲರ ಊಹೆಯನ್ನು ತಲೆಕೆಳಗು ಮಾಡಿ, ರಹಸ್ಯ ಕಾರ್ಯಾಚರಣೆ ನಡೆಸಿ, ದರ್ಶನ್‌ ಅವರ ಆಪ್ತರನ್ನೆಲ್ಲಾ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಬರಲು ಯಶಸ್ವಿಯಾಗಿದ್ದರು.

ಎಸಿಪಿ ಆವಾಜ್‌ಗೆ ನಡುಗಿ ಜೀಪ್‌ ಹೇರಿದ ದರ್ಶನ್‌!
ಈಗ ದರ್ಶನ್‌ ಮಾತ್ರ ಬಾಕಿ, ಅದಕ್ಕಾಗಿ ಮಂಗಳವಾರ ಬೆಳ್ಳಂಬೆಳಗ್ಗೆ ಎಸಿಪಿ ಚಂದನ್ ಕುಮಾರ್ ನೇತೃತ್ವದ ಪೊಲೀಸರ ತಂಡ ದರ್ಶನ್ ತಂಗಿದ್ದ ಮೈಸೂರಿನ ಸ್ಟಾರ್ ಹೋಟೆಲ್‌ಗೆ ಬಂತು. ಚಂದನ್ ಕುಮಾರ್‌ ದರ್ಶನ್‌ ಬಳಿ ಹೋಗಿ ನಮ್ಮ ಜೊತೆ ಬರುವಂತೆ ಹೇಳಿದರು. ಆಗ ದರ್ಶನ್‌ ನನಗೆ ಎಲ್ಲ ಗೊತ್ತು, ನೀವು ಮುಂದೆ ಹೋಗಿ, ನಾನು ನನ್ನ ಕಾರಿನಲ್ಲಿ ಬರ್ತಿನಿ ಎಂದಿದ್ದಾರೆ. ಆಗ ಚಂದನ್‌ ಕುಮಾರ್‌ ಈಗ ನಮ್ಮೊಂದಿಗೆ ಬರ್ತಿರಾ ಅಥವಾ.. ಎಂದು ಹೇಳಿದ್ದಾರೆ.. ಎಸಿಪಿ ಚಂದನ್‌ ಕುಮಾರ್‌ ಅವರ ಬಾಯಿಂದ ಆ ಡೈಲಾಗ್‌ ಬರುತ್ತಲೇ ಪರಿಸ್ಥಿತಿಯ ಗಂಭೀರತೆ ಅರಿತ ದರ್ಶನ್‌ ತಕ್ಷಣವೇ ಪೊಲೀಸ್‌ ಜೀಪ್‌ ಹೇರಿದ್ದಾರೆ. ಆಗ ದರ್ಶನ್‌ ಅವರ 3 ಕೋಟಿ ರೂ. ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಹೋಟೆಲ್ ಗೇಟ್‌ನಲ್ಲಿ ನಿಂತೇ ಇತ್ತು.

ದರ್ಶನ್‌ ಅನ್ನು ಬಂಧಿಸಿ ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬರುವಷ್ಟರಲ್ಲಿ ಸುದ್ದಿ ಎಲ್ಲ ಕಡೆ ಹಬ್ಬಿತ್ತು. ಗಿರೀಶ್‌ ಹಾಗೂ ಪೊಲೀಸ್‌ ಕಮಿಷನರ್‌ ಅವರ ಫೋನ್‌ಗಳು ಒಂದಾದ ಮೇಲೊಂದರಂತೆ ಬಡಿದುಕೊಳ್ಳಲು ಶುರು ಮಾಡಿವೆ. ಅದಾಗಲೇ ಟಿವಿ ಚಾನಲ್‌ಗಳಲ್ಲೂ ಕೂಡ ಬ್ರೇಕಿಂಗ್‌ ನ್ಯೂಸ್‌ ಶುರು ಆಗಿತ್ತು. ದರ್ಶನ್‌ ಮತ್ತು ಆತನ ಆಪ್ತರು ಪೊಲೀಸರು ಈ ರೀತಿ ಮಿಂಚಿನ ವೇಗದಲ್ಲಿ ಕೆಲಸ ಮಾಡ್ತಾರೆ ಎಂಬುದನ್ನು ನಿರೀಕ್ಷೆ ಮಾಡೇ ಇರಲಿಲ್ಲ. ಒಂದಿಷ್ಟು ತಡ ಆಗಿದ್ರು, ಅಥವಾ ಒಂದಿಷ್ಟು ಮಾಹಿತಿ ಲೀಕ್‌ ಆಗಿದ್ರೂ ಎಲ್ಲವೂ ಬದಲಾಗಿರುತ್ತಿತ್ತು ಅಂತಾ ಪೊಲೀಸರೇ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ವೇಗ ಹಾಗೂ ರಹಸ್ಯವಾಗಿ ಈ ಕಾರ್ಯಾಚರಣೆಯನ್ನು ಡಿಸಿಪಿ ಎಸ್‌ ಗಿರೀಶ್‌ ಮತ್ತು ಅವರ ತಂಡ ನಡೆಸಿರುವುದು ಶ್ಲಾಘನೀಯ. ಈ ಮೂಲಕ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅಯ್ಯೋ ಇಷ್ಟು ಕ್ರೂರವಾಗಿ ಕೊಂದಿದ್ರಾ ಡಿ ಗ್ಯಾಂಗ್.. ಹತ್ಯೆಯ ಇಂಚಿಂಚು ಮಾಹಿತಿ ಬಾಬಿಟ್ಟ ಆರೋಪಿಗಳು!

Leave a Reply

Your email address will not be published. Required fields are marked *