BBMP
Loading ...

ಬೆಂಗಳೂರು: ಕನ್ನಡ ಚಿತ್ರರಂಗದ ದಾಸ, ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್​ ಎಂದೆಲ್ಲಾ ಕರೆಯಲ್ಪಟ್ಟ ನಟ ದರ್ಶನ್​ ಇದೀಗ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ, ಪೊಲೀಸರ ಕಸ್ಟಡಿಯಲ್ಲಿದ್ದು, ನಿರಂತರ ವಿಚಾರಣೆಗೆ ಒಳಪಟ್ಟಿದ್ದಾರೆ. ಒಂದೆಡೆ ದರ್ಶನ್​ ಬಂಧನ ಚಿತ್ರರಂಗದ ಗಣ್ಯರು ಸೇರಿದಂತೆ ರಾಜ್ಯದ ಜನತೆಗೂ ಭಾರೀ ಅಚ್ಚರಿ ತಂದರೆ, ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿರುವ ದರ್ಶನ್​ ಪರ ಬೆಂಬಲದ ಘೋಷಣೆಗಳನ್ನು ಕೂಗುತ್ತಿರುವ ಅಭಿಮಾನಿಗಳು ಮತ್ತೊಂದೆಡೆ. ಆರಂಭಿಕ ಹಂತದಲ್ಲೇ ಮುಚ್ಚಿಹೋಗಬೇಕಿದ್ದ ಈ ಪ್ರಕರಣದಲ್ಲಿ ದರ್ಶನ್​ರನ್ನು ಬಯಲಿಗೆಳದು ತಂದಿದ್ದೇ ಈ ದಕ್ಷ ಅಧಿಕಾರಿ.

ಮೂಲತಃ ಚಿತ್ರದುರ್ಗದವರಾದ ಮೃತ ರೇಣುಕಾಸ್ವಾಮಿ, ದರ್ಶನ್​ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಕಳುಹಿಸಿದ್ದರು. ಈ ವಿಷಯಕ್ಕೆ ತನ್ನ ಆಪ್ತರೊಂದಿಗೆ ಸೇರಿ, ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಿ, ಚಿತ್ರಹಿಂಸೆ ನೀಡಿ ಹತ್ಯೆಗೈದ ಆರೋಪದಡಿ ಇತರೆ 13 ಆರೋಪಿಗಳೊಂದಿಗೆ ದರ್ಶನ್​ ಅರೆಸ್ಟ್​ ಆಗಿರುವ ಸುದ್ದಿ ಇದೀಗ ದೇಶವ್ಯಾಪಿ ಭಾರಿ ಚರ್ಚೆಯಾಗುತ್ತಿದೆ.

ಸದ್ಯ ಎಲ್ಲ ಆರೋಪಿಗಳು ಪೊಲೀಸ್​ ಕಸ್ಟಡಿಯಲ್ಲಿದ್ದು, ವಿಚಾರಣೆ ಭರದಿಂದ ಸಾಗುತ್ತಿದೆ. ಅಸಲಿಗೆ ರೇಣುಕಾಸ್ವಾಮಿ ಮಣ್ಣಲ್ಲಿ ಮಣ್ಣಾದಂತೆ ಈ ಪ್ರಕರಣ ಕೂಡ ಬೆಳಕಿಗೆ ಬರುವ ಮುನ್ನವೇ ಆರಂಭಿಕ ಹಂತದಲ್ಲೇ ಮಣ್ಣಾಗಿ ಹೋಗಬೇಕಿತ್ತು. ಮೊದಲಿಗೆ ದೊಡ್ಡ ದೊಡ್ಡ ಆಮಿಷಗಳು, ಪ್ರಭಾವಿಗಳ ನೆರಳು ಸೋಕಿದರೂ ಸಹ ದರ್ಶನ್​ರನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಬೇಟೆಯಾಡಿದ್ದು, ಈ ರಿಯಲ್ ಹೀರೋ. ಇವರಿಲ್ಲದೇ ಹೋಗಿದ್ದರೆ, ಈ ಪ್ರಕರಣ ಗಾಳಿಯಲ್ಲಿ ತೇಲಿ ಹೋಗುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ.

ಆರಂಭಿಕ ಹಂತದಲ್ಲಿ ತಮ್ಮ ವ್ಯಾಪ್ತಿಗೆ ಸೇರಿದಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಪ ಪೊಲೀಸ್ ಆಯುಕ್ತ (ಪಶ್ಚಿಮ ವಿಭಾಗ) ಎಸ್. ಗಿರೀಶ್, ಮುಚ್ಚಿಹೋಗಬೇಕಿದ್ದ ಕೇಸ್​ ಅನ್ನು ಬಯಲಿಗೆಳೆದು, ಸತ್ಯಾಸತ್ಯತೆ ಹೊರತರುವಲ್ಲಿ ಜನಸಾಮಾನ್ಯರು ಮೆಚ್ಚುವಂತೆ ಶ್ರಮಿಸಿದ್ದಾರೆ. ಈ ಡೈನಾಮಿಕ್ ಅಧಿಕಾರಿ ಇಲ್ಲದೇ ಹೋಗಿದಿದ್ದರೆ, ಪ್ರಕರಣದ ಸತ್ಯವು ಹೂತುಹೋಗುತ್ತಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ಕೊಲೆಯ ಆರೋಪದಲ್ಲಿ ರೀಲ್ ನಟನನ್ನು ಸೆರೆಹಿಡಿಯಲು ಧೈರ್ಯ ಬೇಕು. ಆ ಕೆಲಸವನ್ನು ಮಾಡುವಲ್ಲಿ ಡಿಸಿಪಿ ಗಿರೀಶ್​ ಮತ್ತು ಸಹಾಯಕ ಪೊಲೀಸ್ ಕಮಿಷನರ್ (ವಿಜಯನಗರ) ಚಂದನ್ ಕುಮಾರ್ ರಿಯಲ್ ಹೀರೋ ಆಗಿ ಕಾಣಿಸುತ್ತಾರೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಡಿಸಿಪಿ ಗಿರೀಶ್ ಮತ್ತು ಎಸಿಪಿ ಚಂದನ್​ ಕುಮಾರ್​ ಅವರ ಧೈರ್ಯ, ಖಡಕ್ ನಿರ್ಧಾರಕ್ಕೆ ರಾಜ್ಯದ ಜನತೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಸ್ತುತ ವಿಚಾರಣೆಯಲ್ಲಿರುವ ದರ್ಶನ್​ಗೆ ಯಾವ ಶಿಕ್ಷೆ ದೊರೆಯಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *