BBMP
Loading ...

BBMP

ಬೆಂಗಳೂರು: ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಸೋಮವಾರ(ಮೇ.13)ದಂದು ಬೃಹತ್ ಜಾಹೀರಾತು ಹೋರ್ಡಿಂಗ್ ಕುಸಿತವಾಗಿ 14 ಜನ ಸಾವನ್ನಪ್ಪಿದ್ದು, 74 ಜನರಿಗೆ ಗಾಯವಾಗಿತ್ತು. ಇತ್ತ ಬೆಂಗಳೂರಿನಲ್ಲೂ ಅನಧಿಕೃತ ಫ್ಲೆಕ್ಸ್ ಹೋರ್ಡಿಂಗ್ಸ್‌ಗಳು ತಲೆಎತ್ತಿದ್ದು, ಮುಂಬೈ ದುರ್ಘಟನೆ ಬಳಿಕವೂ ಈ ಕುರಿತು ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಈಗಾಗಲೇ ನಗರದಲ್ಲಿ ಅನಧಿಕೃತ ಹೋರ್ಡಿಂಗ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಹೆಬ್ಬಾಳ ರಸ್ತೆ ಸೇರಿದಂತೆ ನಗರದಲ್ಲಿ ಬೃಹತ್ ಹೋರ್ಡಿಂಗ್ಸ್‌ಗಳು ಬಲಿಗಾಗಿ ಕಾದು ಕುಂತಿವೆ.

ಇನ್ನು ಕೆಲವೆಡೆ ಒಂದಕ್ಕೆ ಅನುಮತಿ ಪಡೆದು ಬೇರೆ ಕಡೆಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಕೆ ಆರೋಪ ಕೂಡ ಕೇಳಿಬಂದಿದ್ದು, ಈ ಕುರಿತು ಸಾಮಾಜಿಕ ಕಾರ್ಯಕರ್ತ ಅಮರೇಶ್ ಸಿಎಂ ಗೆ ದೂರು ಸಲ್ಲಿಸಿದ್ದಾರೆ. ಪತ್ರದಲ್ಲಿ‘ ಮಳೆ, ಗಾಳಿಯಿಂದ ಈಗಾಗಲೇ ಹಲವೆಡೆ ಮರಗಳು ಬಿದ್ದಿದ್ದರಿಂದ ಜನರಿಗೆ ಆತಂಕ ಹೆಚ್ಚಾಗಿದೆ. ಹೆಬ್ಬಾಳ ರಸ್ತೆ ಸೇರಿದಂತೆ ಹಲವೆಡೆ ಇರೋ ಬೃಹತ್ ಫ್ಲೆಕ್ಸ್​ಗಳ ಗಾತ್ರಗಳನ್ನು ಕುಗ್ಗಿಸಬೇಕು. ಕೂಡಲೇ ಅನಧಿಕೃತವಾಗಿ ಅಳವಡಿಕೆ ಮಾಡಿರುವ ಹೋರ್ಡಿಂಗ್ಸ್‌ಗಳನ್ನ ತೆರವುಗೊಳಿಸುವಂತೆ ಅಮರೇಶ್‌ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ ಬೃಹತ್ ಫ್ಲೆಕ್ಸ್​​ಗಳಿಂದ ಎನಾದರೂ ಅನಾಹುತಗಳಾದರೆ ಜಿಲ್ಲಾಧಿಕಾರಿ, ಪಾಲಿಕೆಯೇ ನೇರ ಹೊಣೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್‌ಗಳು ಹೈಕೋರ್ಟ್ ಸೂಚನೆ ಮೇರೆಗೆ ಬ್ಯಾನ್ ಆಗಿತ್ತು. ಆದ್ರೆ, ಕಳೆದ ಒಂದು ವರ್ಷದಿಂದ ಮತ್ತೆ ಹೋಲ್ಡಿಂಗ್​​ಗಳು ನಗರದ ಸುತ್ತ ತಲೆ ಎತ್ತಿವೆ.

ಅಕ್ರಮ ಬ್ಯಾನರ್​​ ​ಕಂಡರೆ ಬಿಬಿಎಂಪಿಯ ಈ ನಂಬರ್​ಗೆ ವಾಟ್ಸಪ್​ ಮಾಡಿ

ಅನಧಿಕೃತವಾಗಿ ನಗರದಲ್ಲಿ ಹೋರ್ಡಿಂಗ್ಸ್​, ಫ್ಲೆಕ್ಸ್​, ಬ್ಯಾನರ್​ ಹಾಕುವುದನ್ನು ಬಿಬಿಎಂಪಿ ನಿಷೇಧಿಸಿದೆ. ಆದರೂ ಕೂಡ ನಮ್ಮ ಕಣ್ಣು ತಪ್ಪಿಸಿ ಅಕ್ರಮವಾಗಿ ಹೋರ್ಡಿಂಗ್ಸ್​, ಫ್ಲೆಕ್ಸ್​, ಬ್ಯಾನರ್ ಹಾಕಿದರೇ, ಆ ಸ್ಥಳ ಮತ್ತು ಜಾಹಿರಾತು ಫೋಟೋ ತೆಗೆದು ನಮಗೆ ಕಳುಹಿಸಿ ಎಂದು ಬಿಬಿಎಂಪಿ ಕೆಳ ದಿನಗಳ ಹಿಂದೆ 94806 85700 ವಾಟ್ಸಪ್​ ಸಂಖ್ಯೆ ನೀಡಿತ್ತು. ಅನಧಿಕೃತವಾಗಿ ಬ್ಯಾನರ್‌ಗಳನ್ನು ಹಾಕಿ ಸಾರ್ವಜನಿಕರಿಗೆ ದಕ್ಕೆ ತರುವುದು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್‌ ದಾಖಲಿಸಲಾಗುತ್ತದೆ.

Leave a Reply

Your email address will not be published. Required fields are marked *