ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾ.25ರಿಂದ ಏ.6ರವರೆಗೆ ನಡೆಸಿದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದೆ. ಒಟ್ಟಾರೆ ಶೇ. 73.40 ಮಕ್ಕಳು ತೇರ್ಗಡೆಯಾಗಿದ್ದಾರೆ. ಶೇ. 94 ಫಲಿತಾಂಶದೊಂದಿಗೆ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ, ಶೇ. 50.59 ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಮಂಡಳಿಯ ಅಧಿಕಾರಿಗಳು ಇಂದು ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿ ವೆಬ್ಸೈಟ್ http://karresults.nic.inನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಉಡುಪಿಯ ನಂತರ ಶೇ. 92.12 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದರೆ, ಶೇ. 88.67 ಫಲಿತಾಂಶದೊಂದಿಗೆ ಶಿವಮೊಗ್ಗ ಮೂರನೇ ಸ್ಥಾನದಲ್ಲಿದೆ. ಶೇ. 81.11 ಫಲಿತಾಂಶದೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿ 87.87ರಷ್ಟು ಫಲಿತಾಂಶ ಬಂದಿತ್ತು. ಇನ್ನು ಬಾಲಕರು ಶೇ. 65.90 ಫಲಿತಾಂಶದೊಂದಿಗೆ ತೀವ್ರ ಕುಸಿತ ಕಂಡಿದ್ದಾರೆ. ಕಳೆದ ಬಾರಿ 80.08 ರಷ್ಟು ಫಲಿತಾಂಶ ಬಂದಿತ್ತು.
ಈ ಬಾರಿ ಶೇ. 73.40 ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 83.89 ಫಲಿತಾಂಶಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ಶೇ.10 ಫಲಿತಾಂಶ ಕುಸಿತವಾಗಿದೆ. ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಹಾಗೂ 2288 ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 16 ಕೊನೇ ದಿನವಾಗಿದ್ದು, ಶುಲ್ಕ ಪಾವತಿಗೆ ಮೇ 17 ಅಂತಿಮ ದಿನವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಮೇ 22ರವರೆಗೆ ಅವಕಾಶ ನೀಡಲಾಗಿದೆ.
ಈ ಬಾರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 4,41,910 ವಿದ್ಯಾರ್ಥಿಗಳು ಮತ್ತು 4,28,058 ವಿದ್ಯಾರ್ಥಿನಿಯರು ಪರೀಕ್ಷೆ ಹಾಜರಾಗಿದ್ದರು.


