ನೆಲಮಂಗಲ: ಸುಡುವ ಬಿಸಿಲಿಗೆ ತತ್ತರಿಸಿರುವ ಜನರು ಮಳೆಗಾಗಿ ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದು, ಕಿತ್ತನಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ಆನೆಯ ಮೇಲೆ ಅಂಬಾರಿ ಇಟ್ಟು ದೇವಿಯ ಜಂಬೂ ಸವಾರಿ ಮಾಡಿ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಪವಾಡ ಎಂಬಂತೆ ಉತ್ಸವ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮೊದಲ ಮಳೆಯಾಯಿತು.
ನಗರ ಸಮೀಪದ ದಾಸನಪುರ ಹೋಬಳಿಯ ಕಿತ್ತನಹಳ್ಳಿಯ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಒಳಿತಿಗೆ ಬೇಡಿಕೊಂಡರೆ ಕಷ್ಟ ನಿವಾರಣೆ ಮಾಡುವಳು ಎಂಬ ನಂಬಿಕೆ ಇದೆ. ಅದರಂತೆ ಕಿತ್ತನಹಳ್ಳಿ ಗ್ರಾಮಸ್ಥರು ಚಾಮುಂಡೇಶ್ವರಿ ದೇವಿಯನ್ನು ಇದೇ ಮೊದಲ ಬಾರಿಗೆ ಆನೆ ಕರೆಸಿ ಮರದ ಅಂಬಾರಿ ಮಾಡಿಸಿ ಅಂಬಾರಿಯ ಒಳಗೆ ಚಾಮುಂಡೇಶ್ವರಿಯ ವಿಗ್ರಹ ಇಟ್ಟು ಜಂಬೂಸವಾರಿ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದರು. ಕೊನೆಗೂ ಅವರ ಪ್ರಾರ್ಥನೆ ಫಲಿಸಿತು.
ಚಾಮುಂಡೇಶ್ವರಿ ಜಂಬೂಸವಾರಿಯ ಜತೆ ಗ್ರಾಮದ ಹೆಣ್ಣು ಮಕ್ಕಳು ಚೆಂದದ ಉಡುಪು ಧರಿಸಿ, ಅಂದವಾಗಿ ಅಲಂಕಾರ ಮಾಡಿಕೊಂಡು ದೇವಿಯ ವಿಶೇಷ ಆರತಿಗಳನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಮೆರವಣಿಗೆಗೆ ಹೊಸ ಮೆರುಗು ತಂದಿತು. ಚಾಮುಂಡೇಶ್ವರಿ ಜಾತ್ರೆಗೆ ರಾಣಿಬೆನ್ನೂರಿನಿಂದ ಕರೆಸಿದ್ದ ಆನೆ ನೋಡಲು ನೂಕುನುಗ್ಗಲು ಉಂಟಾಯಿತು.

ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ ಮುಖಂಡ ಹಾಗೂ ಸಮಾಜ ಸೇವಕ ರಾಮಕೃಷ್ಣಪ್ಪ ಎಂಬುವರ ನೇತೃತ್ವದಲ್ಲಿ ಚಾಮುಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಊರಿನ ಮುಖಂಡರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
ಇಂದಿನಿಂದಲೇ 34 ಲಕ್ಷ ರೈತರ ಕೈ ಸೇರಲಿದೆ ಬರ ಪರಿಹಾರ, 3,454 ಕೋಟಿ ಹಸ್ತಾಂತರಿಸಲು ರಾಜ್ಯ ಸರಕಾರ ಸಜ್ಜು


