ಬೆಂಗಳೂರು: ರಾಜ್ಯದ ಸುಮಾರು 34 ಲಕ್ಷ ರೈತರಿಗೆ ಇನ್ನು ಮೂರ್ನಾಲ್ಕು ದಿನಗಳಲ್ಲಿ ಕಳೆದ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರದ ಹಣ ಕೈಸೇರಲಿದೆ. ಕೇಂದ್ರದಿಂದ ಬಂದಿರುವ 3,454 ಕೋಟಿ ರೂ. ಅನ್ನು ಇನ್‌ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಈಗಾಗಲೇ ರೈತರಿಗೆ ವಿತರಿಸಿರುವ ಗರಿಷ್ಠ 2,000 ರೂ.ವರೆಗಿನ ಪರಿಹಾರ ಮೊತ್ತವನ್ನು ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಾಗುತ್ತಿದೆ.
ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಖುಷ್ಕಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾಗಿರುವ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮೊದಲಿಗೆ 15 ಲಕ್ಷ ರೈತರಿಗೆ ಜಮಾ ಮಾಡುವ ಪ್ರಕ್ರಿಯೆ ನಡೆಯಲಿದೆ. ಉಳಿದ ರೈತರಿಗೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪರಿಹಾರದ ಹಣ ತಲುಪಲಿದೆ ಎಂದು ಕಂದಾಯ ಇಲಾಖೆ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ರಾಜ್ಯದಲ್ಲಿ 2ನೇ ಹಂತದ ಚುನಾವಣೆ ವೇಳೆಗೆ ಬಹುತೇಕ ಬೆಳೆ ನಷ್ಟ ಪರಿಹಾರ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಏ. 24ರಂದು ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಮಿತಿ ಸಭೆಯ ನಿರ್ಣಯದಂತೆ ಏ. 26ರಂದು ರಾಜ್ಯಕ್ಕೆ 3,454 ಕೋಟಿ ರೂ. ಬೆಳೆ ನಷ್ಟ ಮಂಜೂರು ತೀರ್ಮಾನ ಪ್ರಕಟಿಸಲಾಗಿತ್ತು. ಈ ಸಂಬಂಧ ಮಂಜೂರಾತಿ ಆದೇಶ ಇನ್ನೂ ರಾಜ್ಯ ಸರಕಾರಕ್ಕೆ ತಲುಪಿಲ್ಲ. ಆದರೆ, ಪೂರ್ಣ ಹಣ ರಾಜ್ಯ ಸರಕಾರಕ್ಕೆ ಬಂದಿದೆ. ಕೇಂದ್ರದಿಂದ ಬಿಡುಗಡೆಯಾಗಿರುವ ಹಣ ವೆಚ್ಚಕ್ಕೆ ರಾಜ್ಯ ಸರಕಾರ ಆದೇಶ ಹೊರಡಿಸಲು ಕೇಂದ್ರದ ಮಂಜೂರಾತಿ ಆದೇಶ ತಲುಪದಿರುವುದು ಅಡ್ಡಿಯಾಗಿದೆ. ಆದರೆ, ಕೇಂದ್ರದ ಪತ್ರಕ್ಕೆ ಕಾಯುತ್ತಾ ಕುಳಿತರೆ ವಿಳಂಬವಾಗಲಿದೆ ಎಂಬ ಕಾರಣಕ್ಕೆ ರೈತರ ಖಾತೆಗೆ ಜಮಾ ಮಾಡಲು ಸರಕಾರ ತೀರ್ಮಾನ ಕೈಗೊಂಡಿದೆ.
ಕೇಂದ್ರದಿಂದ ಬಂದಿರುವ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಚುನಾವಣಾ ಆಯೋಗದ ಸಹಮತಿ ಪಡೆಯಲಾಗಿದ್ದು, ‘ಫ್ರೂಟ್ಸ್’ ಸಾಫ್ಟ್‌ವೇರ್‌ನಲ್ಲಿ ಯಾವ ರೈತರಿಗೆ ಎಷ್ಟು ಪರಿಹಾರ ಎಂಬುದನ್ನು ಲೆಕ್ಕ ಹಾಕಲಾಗಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಹರಾಗಿದ್ದ 33.60 ಲಕ್ಷ ರೈತರ ಪೈಕಿ ಅರ್ಧ ಎಕರೆ ಮತ್ತು ಅದಕ್ಕಿಂತ ಕಡಿಮೆ ವಿಸ್ತೀರ್ಣದ ರೈತರಿಗೆ ಮಧ್ಯಂತರ ಪರಿಹಾರದಲ್ಲೇ ಪೂರ್ಣ ಮೊತ್ತ ತಲುಪಿದ್ದು, ಉಳಿದ ರೈತರಿಗೆ ಈಗ ಬಾಕಿ ಪರಿಹಾರ ಮೊತ್ತ ತಲುಪಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಾಸನ ಪೆನ್ಡ್ರೈವ್ ಪ್ರಕರಣ; ಪ್ರಜ್ವಲ್ ರೇವಣ್ಣ ಮತ್ತೆ ಎಲೆಕ್ಷನ್‌ನಲ್ಲಿ ಗೆದ್ರೆ ಏನಾಗುತ್ತೆ? ಸಂಪೂರ್ಣ ವಿವರ


