Greater Bengaluru News9 : ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರು ಮಂಡ್ಯ ಮೂಲದ ಪಾವನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಇಂದು ಬೆಳಿಗ್ಗೆ 10.45 ರಿಂದ 11.25ರ ಶುಭಮುಹೂರ್ತದಲ್ಲಿ ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದರು. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಸುಂದರ ವಿವಾಹ ಮಹೋತ್ಸವ ನೆರವೇರಿದೆ.
ಮದುವೆಗೂ ಮುನ್ನ ನಿನ್ನೆ ಸಂಜೆ ವೈಭವೋಪೇತ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ತಾರೆಯರಾದ ಡಾಲಿ ಧನಂಜಯ್, ತಾರಾ ಅನುರಾಧ, ಶ್ರೀಮುರಳಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖ ನಟ-ನಟಿಯರು ಹಾಗೂ ತಾಂತ್ರಿಕ ವರ್ಗದವರು ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದರು.
ತಮ್ಮ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಕೋಟ್ಯಂತರ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ, ‘ಉಪಾಧ್ಯಕ್ಷ’ ಸಿನಿಮಾದ ಮೂಲಕ ನಾಯಕ ನಟನಾಗಿಯೂ ಸಫಲರಾಗಿದ್ದಾರೆ. ಇದೀಗ ಪಾವನಾ ಅವರ ಕೈಹಿಡಿಯುವ ಮೂಲಕ ತಮ್ಮ ಜೀವನದ ‘ಸಿಂಗಲ್ ಸೀನ್’ಗೆ ಫುಲ್‌ಸ್ಟಾಪ್ ಇಟ್ಟು, ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ನೆಚ್ಚಿನ ನಟನ ಮದುವೆಯ ಸುದ್ದಿ ತಿಳಿದ ಅಭಿಮಾನಿಗಳು ಹಾಗೂ ಸಿನಿ ರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.


