Greater Bengaluru News9 : ರಾಜಧಾನಿಯಲ್ಲಿ ಪ್ರತಿಭಟನೆಯ ಕೇಂದ್ರವಾಗಿ ಗುರುತಿಸಿಕೊಂಡಿರುವ ಫ್ರೀಡಂ ಪಾರ್ಕ್‌ನಲ್ಲಿ 1 ಲಕ್ಷ ರೂ. ಶುಲ್ಕ ವಿಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಆಕ್ಷೇಪಗಳಿಗೆ GBA ಸ್ಪಷ್ಟನೆ ನೀಡಿದೆ. ಈ ಪರಿಷ್ಕೃತ ಶುಲ್ಕಗಳು ಚಲನಚಿತ್ರ ಹಾಗೂ ಇತರ ಚಿತ್ರೀಕರಣಗಳು, ಪ್ರದರ್ಶನಗಳು, ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಾಹ ಸಂಬಂಧಿತ ಛಾಯಾಗ್ರಹಣಕ್ಕೆ ಮಾತ್ರ ಅನ್ವಯಿಸುತ್ತವೆ ಎಂದು ಸ್ಪಷ್ಟ ಪಡಿಸಿದೆ.
ಈ ವಿಚಾರವಾಗಿ ಇದಕ್ಕೂ ಮೊದಲು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಅಖಿಲ ಭಾರತ ಶಿಕ್ಷಣ ರಕ್ಷಣಾ ಸಮಿತಿಯ ವಿ.ಎನ್. ರಾಜಶೇಖರ್, ಸ್ವಾತಂತ್ರ್ಯ ಮತ್ತು ಪ್ರತಿಭಟಿಸುವ ಹಕ್ಕು ಜನ್ಮಸಿದ್ಧ ಹಕ್ಕುಗಳಾಗಿವೆ. ಅವುಗಳನ್ನು ಕೇವಲ ಹಣ ತೆರಬಲ್ಲವರಿಗೆ ಮಾತ್ರ ಲಭ್ಯವಿರುವ ಸರಕುಗಳನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದಿದ್ದರು. ಅಷ್ಟೇ ಅಲ್ಲ ಈ ಮೊದಲು ವರದಿಯಾಗಿದ್ದ ಪ್ರತಿಭಟನಾ ಶುಲ್ಕವನ್ನು ಖಂಡಿಸಿದ್ದು, ಅದನ್ನು ತಕ್ಷಣವೇ ಹಿಂಪಡೆಯುವಂತೆ ಆಗ್ರಹಿಸಿದ್ದರು.
ಪ್ರಜಾಸತ್ತಾತ್ಮಕ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸುವ ಕಾರ್ಮಿಕರು, ರೈತರು, ಮಹಿಳೆಯರು, ಯುವಜನರು ಮತ್ತು ಶೋಷಿತ ಸಮುದಾಯಗಳು ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗುತ್ತಾರೆ. ಅದಕ್ಕೆ ನಿರ್ದಿಷ್ಟವಾಗಿ ಫ್ರೀಡಂ ಪಾರ್ಕ್ ಬಳಕೆ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಫ್ರೀಡಂ ಪಾರ್ಕ್ನಲ್ಲಿರುವ ಕಟ್ಟಡದ ನಿರ್ವಹಣೆಯ ಹೊಣೆ ಹೊತ್ತಿರುವ GBA , ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ದಿನಕ್ಕೆ 1 ಲಕ್ಷ ರೂ ಶುಲ್ಕವನ್ನು ನಿಗದಿಪಡಿಸಿದೆ ಎಂಬ ವರದಿಗಳ ನಂತರ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಜಿಬಿಎ ಹೇಳಿದ್ದೇನು?: ಜಿಬಿಎ ಸುತ್ತೋಲೆಯಲ್ಲಿ ನೀಡಿರುವ ಸ್ಪಷ್ಟನೆಯಲ್ಲಿ ಪಾರ್ಕ್ನಲ್ಲಿರುವ ಕಟ್ಟಡದ ವಾಣಿಜ್ಯ ಮತ್ತು ಸಂಘಟಿತ ಚಟುವಟಿಕೆಗಳಿಗೆ ವಿಧಿಸುವ ಶುಲ್ಕಗಳ ಬಗ್ಗೆ ವಿವರಿಸುತ್ತದೆಯೇ ಹೊರತು, ಪ್ರತಿಭಟನೆಗಳಿಗೆ 1 ಲಕ್ಷ ರೂ ಶುಲ್ಕದ ಬಗ್ಗೆ ನಿರ್ದಿಷ್ಟವಾಗಿ ಪ್ರಸ್ತಾಪಿಸುವುದಿಲ್ಲ.
ಈ ಹಿಂದೆ ಈ ಕಟ್ಟಡದ ಚಲನ ಚಿತ್ರೀಕರಣ, ಇತರ ರೀತಿಯ ಚಿತ್ರೀಕರಣ, ಪ್ರದರ್ಶನಗಳು, ಸಭೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲು ದಿನಕ್ಕೆ 25,000 ರೂ ಶುಲ್ಕ ವಿಧಿಸುವ ಹಾಗೂ ಏಳು ಕೆಲಸದ ದಿನಗಳೊಳಗೆ ಅನುಮತಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ಇದೀಗ ಪರಿಷ್ಕೃತ ಪ್ರಸ್ತಾವನೆಯು ಈ ಶುಲ್ಕವನ್ನು ದಿನಕ್ಕೆ 75,000ರೂಗೆ ಹೆಚ್ಚಿಸಿದೆ.
ಈ ಹಿಂದೆ ಕಟ್ಟಡವನ್ನು ಧಾರಾವಾಹಿಗಳು, ಕಿರುಚಿತ್ರಗಳು ಮತ್ತು ಇತರ ಚಿತ್ರೀಕರಣಗಳಿಗೆ ಬಳಕೆ ಮಾಡಿದಲ್ಲಿ ದಿನಕ್ಕೆ 25,000 ರೂ, ಮದುವೆ ಪೂರ್ವ ಹಾಗೂ ಮದುವೆ ನಂತರದ ಛಾಯಾಗ್ರಹಣಕ್ಕೆ 5,000 ರೂ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 3,000 ರೂ ದರವನ್ನು ನಿಗದಿಪಡಿಸಲಾಗಿದೆ. ಠೇವಣಿ ಮತ್ತು ಇತರ ವೆಚ್ಚಗಳನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರತ್ಯೇಕವಾಗಿ ನಿರ್ಧರಿಸುತ್ತಿದ್ದರು. ಈ ಮೊತ್ತವನ್ನು ಇದೀಗ ಪರಿಷ್ಕರಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.
ಈ ಪರಿಷ್ಕೃತ ಶುಲ್ಕದ ಅನುಸಾರ ಇದೀಗ ಫ್ರೀಡಂ ಪಾರ್ಕ್ನಲ್ಲಿನ ಕಟ್ಟಡದಲ್ಲಿ ರಾಜಕೀಯ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಪ್ರದರ್ಶನಗಳು ನಡೆಸಿದಲ್ಲಿ ಅವು ಇತರ ಸಭೆಗಳು ಮತ್ತು ಕಾರ್ಯಕ್ರಮಗಳ ವರ್ಗದ ವ್ಯಾಪ್ತಿಗೆ ಬರುತ್ತವೆಯೇ ಎಂಬ ಬಗ್ಗೆ ಪ್ರಶ್ನೆ ಎದ್ದಿತ್ತು. ಅದಕ್ಕೀಗ ಜಿಬಿಎ ಈ ಸ್ಪಷ್ಟನೆ ನೀಡಿದೆ.
ಪ್ರತಿಭಟನೆಗಳ ಕೇಂದ್ರ ಫ್ರೀಡಂ ಪಾರ್ಕ್: ಈ ಹಿಂದೆ ಬೆಂಗಳೂರಿನಲ್ಲಿ ಎಂ.ಜಿ. ರಸ್ತೆ, ಟೌನ್ ಹಾಲ್ ಮತ್ತು ಬನ್ನಪ್ಪ ಪಾರ್ಕ್‌ನಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿತ್ತು. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಸಮೀಪದಿಂದ ಆರಂಭವಾಗುವ ಪ್ರತಿಭಟನಾ ಮೆರವಣಿಗೆಗಳಿಂದ ಸಂಚಾರ ಸಮಸ್ಯೆಯಾಗುತ್ತಿತ್ತು. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೈಕೋರ್ಟ್ ಪ್ರತಿಭಟನೆಗೆ ಒಂದು ಸ್ಥಳ ನಿಗದಿ ಮಾಡುವಂತೆ ಸೂಚಿಸಿತ್ತು. ಇದರಿಂದಾಗಿ ಫ್ರೀಡಂ ಪಾರ್ಕ್ ಪ್ರತಿಭಟನೆಗಳ ನಿಗದಿತ ಕೇಂದ್ರವಾಗಿ ಮಾರ್ಪಟ್ಟಿದೆ.
21 ಎಕರೆ ವಿಸ್ತೀರ್ಣದ ಈ ಉದ್ಯಾನದಲ್ಲಿ, ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಗಾಗಿ ಸುಮಾರು ಐದು ಎಕರೆ ಜಾಗವನ್ನು ಮೀಸಲಿಡಲಾಗಿದೆ. 2018ರಲ್ಲಿ, ಅಂದಿನ ಸಿದ್ದರಾಮಯ್ಯ ಸರ್ಕಾರವು ಭೂಗತ ವಾಹನ ನಿಲುಗಡೆ ವ್ಯವಸ್ಥೆ ಮತ್ತು ಪ್ರತಿಭಟನಾಕಾರರಿಗಾಗಿ ಮೇಲ್ಮಟ್ಟದ ಸ್ಥಳವನ್ನು ಒಳಗೊಂಡಿರುವ ಕಟ್ಟಡವೊಂದನ್ನು ಉದ್ಘಾಟಿಸಿತ್ತು. ಈ ಸೌಲಭ್ಯದ ಕಾಮಗಾರಿ ಹಲವು ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದರೂ, ಇತ್ತೀಚಿನವರೆಗೂ ಇದನ್ನು ಪ್ರತಿಭಟನೆಗಳಿಗಾಗಿ ಮುಕ್ತಗೊಳಿಸಿರಲಿಲ್ಲ.
ಗೊತ್ತುಪಡಿಸಿದ ಪ್ರದೇಶದಲ್ಲಿ ಇನ್ನೂ ಸಾಕಷ್ಟು ಶೌಚಾಲಯಗಳು, ಕುಡಿಯುವ ನೀರು ಮತ್ತು ಬೆಳಕಿನ ಕೊರತೆಯಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ. ದೀರ್ಘಕಾಲದ ಪ್ರತಿಭಟನೆಗಳ ಸಮಯದಲ್ಲಿ ರಾತ್ರಿಯಿಡೀ ಉಳಿಯುವ ಮಹಿಳೆಯರು ಮತ್ತು ಮಕ್ಕಳು ಕಳಪೆ ನೈರ್ಮಲ್ಯ ಮತ್ತು ವಿದ್ಯುತ್ ಸೌಲಭ್ಯಗಳಿಂದಾಗಿ ಹೆಚ್ಚಿನ ತೊಂದರೆಗಳನ್ನು ಎದುರಿಸುತ್ತಾರೆ ಎಂದು ವರದಿಯಾಗಿದೆ.
ಮೂಲ ಸೌಕರ್ಯಗಳೇ ಇಲ್ಲದ ಜಾಗಕ್ಕೆ ಅಧಿಕಾರಿಗಳು ಹೇಗೆ ಭಾರಿ ಶುಲ್ಕವನ್ನು ವಿಧಿಸಬಹುದು ಎಂದು ಕೂಡ ಅಖಿಲ ಭಾರತ ಶಿಕ್ಷಣ ರಕ್ಷಣಾ ಸಮಿತಿಯ ರಾಜಶೇಖರ್ ಪ್ರಶ್ನಿಸಿದ್ದಾರೆ.
ನಿರ್ಬಂಧಕಾರಿ ಹಾಗೂ ಜನವಿರೋಧಿ ಕ್ರಮವೆಂದು ತಾವು ಬಣ್ಣಿಸಿದ ಈ ನಡೆಯನ್ನು ವಿರೋಧಿಸುವಂತೆ ಅವರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ನಾಗರಿಕರಿಗೆ ಕರೆ ನೀಡಿದ್ದಾರೆ. ಈ ಆದೇಶ ಸಾಕಷ್ಟು ಗೊಂದಲ, ವಿವಾದ ಸೃಷ್ಟಿಸಿದ ನಂತರ, ಸ್ಪಷ್ಟ ಆದೇಶವನ್ನು ಹೊರಡಿಸುವಂತೆ ಹಾಗೂ ಫ್ರೀಡಂ ಪಾರ್ಕ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಸುಧಾರಿಸುವಂತೆ ಕಾರ್ಯಕರ್ತರು ಜಿಬಿಎ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


