BBMP
Loading ...

Onions

Greater Bengaluru News9 : ಮುಂದಿನ ತಿಂಗಳಿನಿಂದ ಸಾಲು ಸಾಲು ಹಬ್ಬಗಳು ಬರುತ್ತಿವೆ. ಮುಂದಿನ ತಿಂಗಳ ಗೌರಿ-ಗಣೇಶ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಕೆಜಿಗೆ 100 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 25ರಿಂದ 50 ರೂಪಾಯಿಗೆ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ಸುಮಾರು 65 ರೂಪಾಯಿಗೆ ಮಾರಾಟವಾಗುತ್ತಿದೆ.

ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅವು ನಿರೀಕ್ಷಿತ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.

ಸಗಟು ಈರುಳ್ಳಿ ವ್ಯಾಪಾರಿ ಮನೋಹರ ಗೌಡ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿ ಜೊತೆ ಮಾತನಾಡಿ, ಕೇಂದ್ರ ಸರ್ಕಾರ ಖರೀದಿಸಿರುವ ಈರುಳ್ಳಿ ಪ್ರಮಾಣ ಸಾರ್ವಜನಿಕರ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ. ಖರೀದಿಸಿರುವ ಪ್ರಮಾಣ ಬಹಳ ಕಡಿಮೆ ಇದೆ. ಮಳೆ ಕೊರತೆಯಿಂದಾಗಿ ರಾಜ್ಯದ ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶಗಳಿಂದ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ಗೌರಿ-ಗಣೇಶ ಹಬ್ಬದ ವೇಳೆಗೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದರು.

ಮಹಾರಾಷ್ಟ್ರದ ವಿದರ್ಭ ಪ್ರದೇಶದ ಕೆಲವು ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಅಧಿಕ ಮಳೆಯಾಗಿರುವುದರಿಂದಲೂ ಇಳುವರಿ ಕುಸಿದಿದೆ ಎಂದು ಗೌಡ ಹೇಳಿದರು.

ಕರ್ನಾಟಕದಲ್ಲಿ ಗದಗ, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಆದರೆ ಈ ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಿಂದಾಗಿ ರೈತರು ಸಾಮಾನ್ಯ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲು ಸಾಧ್ಯವಾಗಿಲ್ಲ.

ಈರುಳ್ಳಿ ಪ್ರಧಾನವಾಗಿ ಮಳೆಯನ್ನೇ ಅವಲಂಬಿಸಿರುವ ಬೆಳೆಯಾಗಿರುವುದರಿಂದ, ಮಳೆ ಕೊರತೆಯು ರೈತರಿಗೆ ಸಂಕಷ್ಟ ತಂದಿದೆ.

ಮತ್ತೊಬ್ಬ ಸಗಟು ಈರುಳ್ಳಿ ವ್ಯಾಪಾರಿ ರಾಮು ಅವರು ಟಿಎನ್‌ಐಇ ಜೊತೆ ಮಾತನಾಡಿ, “ನಾವು ಮಹಾರಾಷ್ಟ್ರದ ನಾಸಿಕ್ ಹಾಗೂ ವಿದರ್ಭ ಪ್ರದೇಶದ ಇತರ ಭಾಗಗಳಿಂದ ಈರುಳ್ಳಿ ಖರೀದಿಸುತ್ತೇವೆ. ಮಳೆ ಕೊರತೆಯಿಂದ ಈರುಳ್ಳಿ ಉತ್ಪಾದನೆ ಕುಸಿದಿದೆ. ಅಕ್ಟೋಬರ್ ಮಧ್ಯಭಾಗದ ವೇಳೆಗೆ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಿದ್ದೇವೆ. ಅಲ್ಲಿಯವರೆಗೆ ಮಹಾರಾಷ್ಟ್ರದಿಂದ ಪೂರೈಕೆ ಕಡಿಮೆ ಇರುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ” ಎಂದರು.

ಇದೇ ವೇಳೆ, ಡೀಸೆಲ್ ಬೆಲೆ ಏರಿಕೆಯಿಂದ ಅಕ್ಕಿ, ಸಕ್ಕರೆ, ಬೆಲ್ಲ, ಅಡುಗೆ ಎಣ್ಣೆ ಹಾಗೂ ಬೇಳೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಸಾಗಣೆ ವೆಚ್ಚ ಹೆಚ್ಚಾಗಿದೆ. ಇದರ ಪರಿಣಾಮ ರೆಸ್ಟೋರೆಂಟ್‌ಗಳಲ್ಲಿನ ಆಹಾರ ದರಗಳ ಮೇಲೂ ಪರಿಣಾಮ ಬೀರುತ್ತಿದೆ.

ಈರುಳ್ಳಿ ದೋಸೆ, ಪಾನಿಪುರಿ, ಮಸಾಲೆ ಪುರಿ ಸೇರಿದಂತೆ ಈರುಳ್ಳಿ ಬಳಸಿ ತಯಾರಿಸುವ ಜನಪ್ರಿಯ ಆಹಾರಗಳ ಬೆಲೆಯೂ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *