ಬೆಂಗಳೂರು: ಸಿವಿಲ್ ಸ್ವರೂಪದ ಆಸ್ತಿ ವಿವಾದದಲ್ಲಿ ಉಯಿಲು (ವಿಲ್) ಪತ್ರಕ್ಕೆ ಕೇವಲ ಸಾಕ್ಷಿಯಾಗಿ ಸಹಿ ಹಾಕಿದ್ದ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿದ ವೈಟ್‌ಫೀಲ್ಡ್ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕಾನೂನುಬಾಹಿರ ಕೃತ್ಯ ಎಸಗಿದ ವೈಟ್‌ಫೀಲ್ಡ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ), ಸಂಬಂಧಪಟ್ಟ ಎಸಿಪಿ ಹಾಗೂ ಡಿಸಿಪಿಗೆ ನ್ಯಾಯಾಲಯ ಬರೋಬ್ಬರಿ ₹3 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ವರ್ತೂರು ನಿವಾಸಿ ಕೆ. ಎನ್. ಮೋಹನ್ ರೆಡ್ಡಿ ಅವರು ತಮ್ಮ ಮೇಲಿನ ಅಕ್ರಮ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ.
ನೋಟಿಸ್ ದಿನಾಂಕಕ್ಕೂ ಮುನ್ನವೇ ಬಂಧನ: ಕೋರ್ಟ್ ಕೆಂಡಾಮಂಡಲ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಅರ್ಜಿದಾರ ಮೋಹನ್ ರೆಡ್ಡಿಗೆ ಆಗಸ್ಟ್ 27ರ ಗಡುವು ನೀಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ನೀಡಿದ ಗಡುವು ಮುಗಿಯುವ ಮುನ್ನವೇ, ಅಂದರೆ ಆಗಸ್ಟ್ 25ರಂದೇ ಅವರನ್ನು ತರಾತುರಿಯಲ್ಲಿ ಬಂಧಿಸಲಾಗಿತ್ತು. ಸಂಪೂರ್ಣವಾಗಿ ಸಿವಿಲ್ ಸ್ವರೂಪದ ಈ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲದಿದ್ದರೂ, ವಿನಾಕಾರಣ ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಪೀಠ ಗರಂ ಆಯಿತು.
‘ಪೊಲೀಸ್ ರಾಜ್’ಗೆ ಕಠಿಣ ಎಚ್ಚರಿಕೆ; ಇಲಾಖಾ ತನಿಖೆಗೆ ಆದೇಶ
ಅಧಿಕಾರಿಗಳಿಗೆ ₹3 ಲಕ್ಷ ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಿದ ನ್ಯಾಯಪೀಠ, ರಾಜ್ಯದಲ್ಲಿ ಇಂತಹ “ಪೊಲೀಸ್ ರಾಜ್ ವ್ಯವಸ್ಥೆ” ಕೊನೆಗೊಳ್ಳಬೇಕು; ಇಲ್ಲವಾದರೆ ನ್ಯಾಯಾಲಯವೇ ಕಠಿಣ ಕ್ರಮಗಳ ಮೂಲಕ ಇದಕ್ಕೆ ಕಡಿವಾಣ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿತು.
ನ್ಯಾಯಾಲಯದಲ್ಲಿ ಹಾಜರಿದ್ದ ವೈಟ್‌ಫೀಲ್ಡ್ ಪಿಎಸ್‌ಐ ಹಾಗೂ ತನಿಖಾಧಿಕಾರಿ ಸುನೀಲ್ ಕುಮಾರ್ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, “ಆರೋಪಿ ತನಿಖೆಗೆ ಅಸಹಕಾರ ತೋರಿದರೆ ಮಾತ್ರ ಬಂಧಿಸಬಹುದು. ಆದರೆ ನೋಟಿಸ್ ನೀಡಿದ ದಿನವೇ ಏಕೆ ಬಂಧಿಸಿದಿರಿ? ಯಾರ ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿರಿ?” ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಅಧಿಕಾರಿಯಿಂದ ಯಾವುದೇ ಸ್ಪಷ್ಟ ಉತ್ತರ ಬರಲಿಲ್ಲ.
ಡಿಸಿಪಿ, ಎಸಿಪಿಗೂ ಹೊಣೆಗಾರಿಕೆ ನಿಗದಿ
ಸರ್ಕಾರಿ ವಕೀಲರು ಅಧಿಕಾರಿಯ ಪರವಾಗಿ ಕ್ಷಮಾದಾನ ಕೋರಿ ಸಮಜಾಯಿಷಿ ನೀಡಲು ಯತ್ನಿಸಿದರೂ ಪೀಠ ಅದನ್ನು ಸ್ಪಷ್ಟವಾಗಿ ನಿರಾಕರಿಸಿತು. “ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕನ್ನು ಕಸಿಯುವಾಗ ಕೇವಲ ತನಿಖಾಧಿಕಾರಿ ಮಾತ್ರವಲ್ಲ, ಇಡೀ ಠಾಣೆ ಹಾಗೂ ಮೇಲ್ವಿಚಾರಣೆ ನಡೆಸದ ಡಿಸಿಪಿ, ಎಸಿಪಿ ಕೂಡ ಸಮಾನ ಹೊಣೆಗಾರರು. ಹೀಗಾಗಿ ದಂಡದ ಮೊತ್ತವನ್ನು ಅವರೂ ಭರಿಸಬೇಕು” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ಮೂಗು ತೂರಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಕೆಳ ಹಂತದ ವಿಚಾರಣಾ ನ್ಯಾಯಾಲಯಗಳು ಕೂಡ ಪೊಲೀಸರ ವಾದವನ್ನು ಕುರುಡಾಗಿ ಒಪ್ಪಿ ಆದೇಶ ನೀಡುವುದನ್ನು ನಿಲ್ಲಿಸಬೇಕು ಎಂದು ಕಿಡಿಕಾರಿತು.


