Greater Bengaluru News9 : ನಗರದ ಸಿನಿಪ್ರಿಯರ ಭಾವನೆಗಳೊಂದಿಗೆ ಬೆಸೆದುಕೊಂಡಿದ್ದ ಐಕಾನಿಕ್ ಊರ್ವಶಿ ಚಿತ್ರಮಂದಿರ ಇನ್ನು ನೆನಪು ಮಾತ್ರವಾಗಲಿದೆ. ಲಾಲ್ಬಾಗ್ ಸಮೀಪದಲ್ಲಿರುವ ಈ ಪ್ರಸಿದ್ಧ ಚಿತ್ರಮಂದಿರವನ್ನು ಕೋರ್ಟ್ ಆದೇಶದಂತೆ ನೆಲಸಮಗೊಳಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ.
1970ರಲ್ಲಿ ನಿರ್ಮಾಣಗೊಂಡಿದ್ದ ಊರ್ವಶಿ ಚಿತ್ರಮಂದಿರ ಹಲವು ದಶಕಗಳ ಕಾಲ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿತ್ತು. ಬೆಂಗಳೂರಿನ ಸಿನಿರಸಿಕರ ಪಾಲಿಗೆ ಇದು ಕೇವಲ ಚಿತ್ರಮಂದಿರವಲ್ಲ, ಸಿನಿಮಾಗಳ ಹಬ್ಬವನ್ನು ಸಂಭ್ರಮಿಸುವ ಪ್ರಮುಖ ತಾಣವಾಗಿತ್ತು.
ಈ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದಿದ್ದ ಭೂಮಾಲೀಕ ಬಸಟ್ಟಿ ಶೆಟ್ಟಿ ಅವರ ಗುತ್ತಿಗೆ ಅವಧಿ 2018ರ ಏಪ್ರಿಲ್ನಲ್ಲೇ ಅಂತ್ಯಗೊಂಡಿತ್ತು. ಬಳಿಕ ನಡೆದ ಕಾನೂನು ಹೋರಾಟದ ನಂತರ ಕೋರ್ಟ್ ಆದೇಶದಂತೆ ಈಗ ಚಿತ್ರಮಂದಿರವನ್ನು ನೆಲಸಮಗೊಳಿಸಲಾಗುತ್ತಿದೆ.
ಕನ್ನಡ ಚಿತ್ರರಂಗದ ಅನೇಕ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಊರ್ವಶಿ ಸಾಕ್ಷಿಯಾಗಿದೆ. ಕೆಜಿಎಫ್, ಕಾಂತಾರ ಸೇರಿದಂತೆ ಹಲವು ಯಶಸ್ವಿ ಚಿತ್ರಗಳು ಇಲ್ಲಿ ಪ್ರದರ್ಶನ ಕಂಡಿದ್ದವು. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಜನನಾಯಗನ್’ ಚಿತ್ರವೂ ಇದೇ ಚಿತ್ರಮಂದಿರದಲ್ಲಿ ಪ್ರದರ್ಶನವಾಗಿತ್ತು.
ಅಷ್ಟೇ ಅಲ್ಲ, ನಟ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಪ್ರದರ್ಶನಕ್ಕೂ ಊರ್ವಶಿ ಸಜ್ಜಾಗಿತ್ತು. ಈಗಾಗಲೇ ಚಿತ್ರಮಂದಿರದ ಮುಂದೆ ಯಶ್ ಅವರ ಭಾರೀ ಕಟೌಟ್ಗಳು ಮತ್ತು ಫ್ಲೆಕ್ಸ್ಗಳನ್ನು ಅಳವಡಿಸಲಾಗಿತ್ತು. ಆದರೆ ಇದೀಗ ಆ ಐತಿಹಾಸಿಕ ಚಿತ್ರಮಂದಿರವೇ ಧರೆಗುರುಳುತ್ತಿರುವ ದೃಶ್ಯ ಸಿನಿಪ್ರಿಯರಲ್ಲಿ ಭಾರೀ ಬೇಸರ ಮೂಡಿಸಿದೆ.
ಒಮ್ಮೆ ಸ್ಟಾರ್ ನಟರ ‘ಲಕ್ಕಿ ಥಿಯೇಟರ್’ ಎಂದೇ ಗುರುತಿಸಿಕೊಂಡಿದ್ದ ಊರ್ವಶಿ, ಅನೇಕ ಸಿನಿ ನೆನಪುಗಳನ್ನು ಹೊತ್ತ ಐಕಾನಿಕ್ ತಾಣವಾಗಿತ್ತು. ಇದೀಗ ಅದರ ನೆಲಸಮ ಕಾರ್ಯ ಆರಂಭವಾಗಿರುವುದು ಬೆಂಗಳೂರಿನ ಚಿತ್ರರಂಗ ಹಾಗೂ ಸಿನಿರಸಿಕರಿಗೆ ಭಾವನಾತ್ಮಕ ಕ್ಷಣವಾಗಿದೆ.


