Greater Bengaluru News9: ವಿದ್ಯುತ್ ಎಂಬುದು ಕೇವಲ ಬೆಂಕಿಯಲ್ಲ, ಅದು ಯಾರೊಬ್ಬರ ನಿರ್ಲಕ್ಷ್ಯಕ್ಕೂ ಪ್ರಾಣ ತೆಗೆಯಬಲ್ಲ ಮಹಾಸ್ಫೋಟಕ ಶಕ್ತಿ! ಇಂತಹ ಅತಿ ಸೂಕ್ಷ್ಮ ಕ್ಷೇತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಮತ್ತು ಸೂಪರ್ವೈಸರ್ಗಳಿಲ್ಲದೆ ಯಾವುದೇ ವಿದ್ಯುತ್ ಕೆಲಸವೂ ಸುರಕ್ಷಿತವಾಗಿ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ. ಆದರೆ ಇದನ್ನು ಮರೆತಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC), ತನ್ನ ಡ್ರಾಫ್ಟ್ ಎಲೆಕ್ಟ್ರಿಸಿಟಿ ಸಪ್ಲೈ ರೆಗ್ಯುಲೇಷನ್ಸ್, 2026ರಲ್ಲಿ ಅತ್ಯಂತ ಅವೈಜ್ಞಾನಿಕ ಹಾಗೂ ಆತಂಕಕಾರಿ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದೆ. ವೃತ್ತಿಪರರ ಕೈಯಲ್ಲಿದ್ದ ಜವಾಬ್ದಾರಿಯನ್ನು ಕಿತ್ತುಕೊಂಡು, ತಜ್ಞರ ಅನುಭವವೇ ಇಲ್ಲದ ಮಾಲೀಕರ ಹೆಗಲಿಗೇ ಸ್ವಯಂ ಪ್ರಮಾಣೀಕರಣದ ಹೊರೆ ಹೊರಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ.
ಕರಡು ನಿಯಮಗಳ ಅಸಲಿಯತ್ತು ಮತ್ತು ಗುತ್ತಿಗೆದಾರರ ಅಸ್ತಿತ್ವಕ್ಕೆ ಕುತ್ತು
KERCಯ Draft Electricity Supply Regulations, 2026ರ ಕರಾಳ ಮುಖವೆಂದರೆ, 150 KW ವರೆಗೆ ಮತ್ತು 650Vಗಿಂತ ಕಡಿಮೆ ವೋಲ್ಟೇಜ್ನ ವಿದ್ಯುತ್ ಸ್ಥಾಪನೆಗಳನ್ನು ಸ್ವತಃ ಮಾಲೀಕರೇ ಪರಿಶೀಲಿಸಿ, ಪರೀಕ್ಷಿಸಿ ಪ್ರಮಾಣೀಕರಿಸಬಹುದೆಂಬ ಅಡ್ಡದಾರಿ ಪ್ರಸ್ತಾವನೆ. ಅಲ್ಲಿಗೆ ವರ್ಷಗಟ್ಟಲೆ ಓದಿ, ಸರಕಾರದಿಂದ ಪರವಾನಗಿ ಪಡೆದು, ಮೈಕೈಯನ್ನು ದಂಡಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಹಾಗೂ ಸಾರ್ವಜನಿಕರ ಜೀವದ ಜವಾಬ್ದಾರಿ ಹೊರುವ ವಿದ್ಯುತ್ ಗುತ್ತಿಗೆದಾರರು ಮತ್ತು ಸೂಪರ್ವೈಸರ್ಗಳ ಅಸ್ತಿತ್ವಕ್ಕೇ ಕತ್ತರಿ ಪ್ರಯೋಗಿಸಲಾಗಿದೆ. ಅನುಭವವಿಲ್ಲದವರ ಕೈಗೆ ವಿದ್ಯುತ್ ಪರಿಶೀಲನೆಯ ಲಗಾಮು ಕೊಟ್ಟರೆ, ಮುಂದಾಗುವ ಭೀಕರ ಅನಾಹುತಗಳು ಮತ್ತು ಪ್ರಾಣಹಾನಿಗೆ ಹೊಣೆ ಯಾರು? ಇದು ಕೇವಲ ಉದ್ಯೋಗ ಭದ್ರತೆಯ ಪ್ರಶ್ನೆಯಲ್ಲ, ಇಡೀ ಸಮಾಜದ ಜೀವ ಸುರಕ್ಷತೆಯ ಮೇಲಿನ ನೇರ ದಾಡಿಯಾಗಿದೆ.
ಸೂಪರ್ವೈಸರ್ಗಳು ಮತ್ತು ಗುತ್ತಿಗೆದಾರರಿಲ್ಲದೆ ವಿದ್ಯುತ್ ಕ್ಷೇತ್ರ ಶೂನ್ಯ
ಯಾವುದೇ ಒಂದು ಬೃಹತ್ ಕಟ್ಟಡವಾಗಲಿ, ಕೈಗಾರಿಕೆಯಾಗಲಿ ಅಥವಾ ಸಾರ್ವಜನಿಕ ಸ್ಥಾಪನೆಯಾಗಲಿ; ಅಲ್ಲಿ ವೈರಿಂಗ್ನಿಂದ ಹಿಡಿದು ಸಂಪೂರ್ಣ ವಿದ್ಯುತ್ ಜೋಡಣೆಯವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಪರೀಕ್ಷಿಸಿ ಪ್ರಮಾಣಪತ್ರ ನೀಡುವುದು ಪರವಾನಗಿ ಪಡೆದ ಗುತ್ತಿಗೆದಾರರು ಮತ್ತು ಸೂಪರ್ವೈಸರ್ಗಳು ಮಾತ್ರ. ಇವರ ತಾಂತ್ರಿಕ ಕಣ್ಣುಗಳು ಮತ್ತು ದೃಢೀಕರಣವಿಲ್ಲದೆ ಅಲ್ಲಿ ಒಂದು ವಯರೂ ಸುರಕ್ಷಿತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಕೇವಲ ಕಾಗದದ ಮೇಲೆ ಮಾಲೀಕರಿಂದ ಸಹಿ ಹಾಕಿಸಿಕೊಂಡು ಪ್ರಮಾಣೀಕರಿಸುವ ಹುಚ್ಚಾಟಕ್ಕೆ KERC ಕೈಹಾಕಿದರೆ, ನಾಳೆ ರಾಜ್ಯದಲ್ಲಿ ಅಕ್ರಮ ಮತ್ತು ಕಳಪೆ ವಿದ್ಯುತ್ ಕಾಮಗಾರಿಗಳ ಮಹಾಪೂರವೇ ಹರಿದುಬರಲಿದೆ. ಗುತ್ತಿಗೆದಾರರು ಮತ್ತು ತಜ್ಞರ ಬೆವರು, ಪರಿಶ್ರಮ ಹಾಗೂ ಮೇಲ್ವಿಚಾರಣೆ ಇಲ್ಲದೆ ಯಾವ ಇಲಾಖೆಯಾಗಲಿ ಅಥವಾ ಕಾಯಿದೆಯಾಗಲಿ ಮುನ್ನಡೆಯಲು ಸಾಧ್ಯವಿಲ್ಲ ಎಂಬುದನ್ನು ಆಯೋಗವು ಮರೆತಿದೆ.
ಸರ್ಕಾರದ ಕಣ್ಣು ತೆರೆಸಲು ಸಾಮೂಹಿಕ ಹೋರಾಟದ ಅನಿವಾರ್ಯತೆ
ವಿದ್ಯುತ್ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಮ್ಮ ಖಡಕ್ ಎಚ್ಚರಿಕೆ. KERCಯ ಈ ಹುಚ್ಚುತುಡಿತದ ಪ್ರಸ್ತಾವನೆಯನ್ನು ನಾವು ಕಟುವಾಗಿ ವಿರೋಧಿಸುತ್ತೇವೆ. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (KSLECA) ಇದರ ವಿರುದ್ಧ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಗುತ್ತಿಗೆದಾರರ ಹಾಗೂ ಸೂಪರ್ವೈಸರ್ಗಳ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟದ ಕಹಳೆ ಮೊಳಗಿಸಿದೆ. ಕೇವಲ ಗುತ್ತಿಗೆದಾರರು ಮಾತ್ರವಲ್ಲದೆ, ಗ್ರಾಹಕರು, ರೈತರು, ಕೈಗಾರಿಕೋದ್ಯಮಿಗಳು ಮತ್ತು ಪ್ರತಿಯೊಬ್ಬ ನಾಗರಿಕರು ಇದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನಮ್ಮ ಹಕ್ಕನ್ನು ಕಸಿದುಕೊಳ್ಳಲು ಯತ್ನಿಸುವ ಈ ದರೋಡೆಕೋರ ಕರಡು ನಿಯಮವನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.
ಆಕ್ಷೇಪಣೆ ಸಲ್ಲಿಕೆ: ಈಗಲೇ ನಿಮ್ಮ ಧ್ವನಿ KERCಗೆ ಮುಟ್ಟಲಿ
ಈ ಅನ್ಯಾಯದ ವಿರುದ್ಧ ಸುಮ್ಮನೆ ಕೂರುವ ಕಾಲವಲ್ಲ, ಒಗ್ಗಟ್ಟಾಗಿ ತಿರುಗಿಬೀಳುವ ಸಮಯ ಬಂದಿದೆ. KERCಯ Draft Regulationsನ ಖಂಡಿಕೆ 4.6ರ ವಿರುದ್ಧ ತಮ್ಮ ತೀವ್ರ ಆಕ್ಷೇಪಣೆಗಳನ್ನು ದಾಖಲಿಸಲು ಕೇಂದ್ರ ಸಮಿತಿಯು ಅತ್ಯಂತ ಸರಳವಾದ ಆನ್ಲೈನ್ ಪೋರ್ಟಲ್ ಒಂದನ್ನು ಸಿದ್ಧಪಡಿಸಿದೆ. https://protect-civic-mail.preview.emergentagent.com/ ಲಿಂಕ್ ಬಳಸಿ ಇ-ಮೇಲ್ ಮುಖಾಂತರ ಕೂಡಲೇ ನಿಮ್ಮ ಆಕ್ಷೇಪಣೆಯನ್ನು ಕಳುಹಿಸಿ (ಇ-ಮೇಲ್ ಇಲ್ಲದವರು ಕಡ್ಡಾಯವಾಗಿ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿ). ಗುತ್ತಿಗೆದಾರರ ಮತ್ತು ಸೂಪರ್ವೈಸರ್ಗಳ ಮಹತ್ವವನ್ನು KERCಗೆ ಮನವರಿಕೆ ಮಾಡಿಕೊಡೋಣ.
ಗುತ್ತಿಗೆದಾರರು ಮತ್ತು ಸೂಪರ್ವೈಸರ್ಗಳಿಲ್ಲದೆ ವಿದ್ಯುತ್ ಕ್ಷೇತ್ರದಲ್ಲಿ ಯಾವುದೇ ಕೆಲಸ ಪೂರ್ಣಗೊಳ್ಳಲು ಸಾಧ್ಯವಿಲ್ಲ. ನಮ್ಮ ಅಸ್ತಿತ್ವ ಮತ್ತು ಸಾರ್ವಜನಿಕರ ಜೀವ ಸುರಕ್ಷತೆಗಾಗಿ ಕೊನೆವರೆಗೆ ಹೋರಾಡುತ್ತೇವೆ ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ರಮೇಶ್ ಅವರು ಹಾಗೂ ಕೇಂದ್ರ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಹೋರಾಟ ಸಮಿತಿಯ ಚೇರ್ಮನ್ ವೈ.ಎಚ್. ಆನಂದ್ ಅವರು ಹೇಳಿದ್ದಾರೆ.


