BBMP
Loading ...

M Krishnappa

Greater Bengaluru News9 : ‘ನಮಗೆ ಸಚಿವ ಸ್ಥಾನ ಕೈತಪ್ಪಿರುವ ವಿಚಾರದಲ್ಲಿ ತಪ್ಪಾಗಿದೆ ಎಂದು ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ. ನಮಗೆ ಎಲ್ಲಾ ಅರ್ಹತೆಯಿದೆ. ಹೀಗಾಗಿ ಸಚಿವ ಸ್ಥಾನ ಬಿಟ್ಟು ಬೇರೆ ಯಾವುದೇ ಆಯ್ಕೆಯಿಲ್ಲ, ಸಚಿವ ಸ್ಥಾನ ನೀಡಬೇಕಷ್ಟೆ’ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಬೆಂಗಳೂರಿನ ವಿಜಯನಗರ ಕ್ಷೇತ್ರದ ಎಂ.ಕೃಷ್ಣಪ್ಪ ಹೇಳಿದ್ದಾರೆ.

‘ತಪ್ಪನ್ನು ಸರಿಪಡಿಸುವುದಾಗಿ ಹೇಳಿದ್ದಾರೆ. ನಾವು ಸಚಿವ ಸ್ಥಾನಕ್ಕೆ ಪಟ್ಟುಹಿಡಿದಿದ್ದೇವೆ. ಅದನ್ನು ಬಿಟ್ಟು ಬೇರೇನೂ ಒಪ್ಪುವುದಿಲ್ಲ, ನಥಿಂಗ್ ಲೆಸ್ ದ್ಯಾನ್‌ ದಟ್‌. ಈ ಮಾತು ಅಂತಿಮ. ಸಚಿವ ಸ್ಥಾನ ಸಿಕ್ಕಿಲ್ಲ ಎಂದರೆ ಮುಂದಿನದ್ದು ಬೇರೆ’ ಎಂದೂ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಎಐಸಿಸಿ ವರಿಷ್ಠರ ಮನವೊಲಿಕೆ ಕಸರತ್ತಿನ ಬಳಿಕವೂ ಸಮಾಧಾನಗೊಳ್ಳದ ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ, ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮುಂದುವರೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಪ್ಪ, ನಾನು 5 ಬಾರಿ ಶಾಸಕ, ಪ್ರಿಯಕೃಷ್ಣ 3 ಬಾರಿಯ ಶಾಸಕ. ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು. ನಮ್ಮಂಥ ಅರ್ಹರಿಗೆ ನೀಡದೆ ಕಾಂಗ್ರೆಸ್‌ ಅನ್ನು ಉದ್ಧಾರ ಮಾಡಬೇಕು ಎಂದು ಮಾಡಿದ್ದೀರಾ ಅಥವಾ ಹಾಳು ಮಾಡಬೇಕು ಎಂದುಕೊಂಡಿದ್ದೀರಾ? ಎಂದು ಕಿಡಿಕಾರಿದರು.

ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದಿದೆ ಮುಂದೆ ಅವಕಾಶ ಸಿಗಬಹುದು ಎಂದು ಸುಮ್ಮನಿದ್ದೆವು. ಹಾಗಂತ ಸುಮ್ಮನಿದ್ದೇವೆಂದು ತಲೆ ಮೇಲೆ ಚಪ್ಪಡಿ ಎಳೆದರೆ ಸಹಿಸಬೇಕೇ? ಸುರ್ಜೇವಾಲಾ, ಮುಖ್ಯಮಂತ್ರಿ, ಹರಿಪ್ರಸಾದ್‌ ಎಲ್ಲರೂ ತಪ್ಪಾಗಿದೆ ಎಂದಿದ್ದಾರೆ. ತಪ್ಪು ಸರಿಪಡಿಸಬೇಕು ಅಷ್ಟೆ ಎಂದು ಸ್ಪಷ್ಟಪಡಿಸಿದರು.

ನಮಗೆ ಆಯ್ಕೆ ನೀಡುವ ಧೈರ್ಯ ಯಾರಿಗೂ ಇಲ್ಲ:
ಪ್ರಿಯಕೃಷ್ಣ ಅವರಿಗೆ ಪ್ರಮುಖ ನಿಗಮ-ಮಂಡಳಿ ಆಫರ್‌ ನೀಡಲಾಗುತ್ತಿದೆ ಎಂಬ ಪ್ರಶ್ನೆಗೆ, ನನಗಾಗಲಿ, ಪ್ರಿಯಕೃಷ್ಣಗೆ ಆಗಲಿ ನಿಗಮ-ಮಂಡಳಿ ಅಧ್ಯಕ್ಷರಾಗಿ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ನಾವು ಅರ್ಹರಿದ್ದೇವೆ. ಈಗ ಆಗಿರುವ ಯಾವ ಸಚಿವರಿಗಿಂತಲೂ ಯಾವುದರಲ್ಲೂ ನಾವು ಕಡಿಮೆ ಇಲ್ಲ. ಜನರ ಪ್ರೀತಿಗೆ ಬೆಲೆ ಬೇಡವೇ ಎಂದು ಪ್ರಶ್ನಿಸಿದರು.

ಹರಿಪ್ರಸಾದ್ ಮತ್ತು ನಾವು ಉತ್ತಮ ಸ್ನೇಹಿತರು. ಈಗಾಗಲೇ ಸುರ್ಜೇವಾಲಾ, ಮುಖ್ಯಮಂತ್ರಿ ಅವರು ಮಾತನಾಡಿದ್ದಾರೆ. ತಪ್ಪಾಗಿದೆ ಎಂದಿದ್ದಾರೆ, ಸರಿಪಡಿಸಿ ಎಂದಿದ್ದೇವೆ. ಪದೇ ಪದೇ ಅವಮಾನ ಮಾಡಿದರೆ ಬೇಸರ ಆಗುತ್ತದೆ. ಅದೇ ನನಗೂ ಆಗಿದೆ ಎಂದು ಹೇಳಿದರು.

ಯುವಕರಿಗೆ ಅವಕಾಶ ಕೊಡಬೇಕು ಎಂದು ರಾಹುಲ್‌ಗಾಂಧಿ ಹೇಳಿದ್ದರು. ಪ್ರಿಯಕೃಷ್ಣ ಯುವಕನಲ್ಲವೇ? ಈಗ ಸಚಿವರಾಗಿರುವ ಯುವಕರೆಲ್ಲರಿಗಿಂತಲೂ ಪ್ರಿಯಕೃಷ್ಣ ಯುವಕ ಹೌದೋ, ಅಲ್ವೋ ಹೇಳಲಿ. ಯಡಿಯೂರಪ್ಪ ಸರ್ಕಾರದ ವೇಳೆ ಉಪ ಚುನಾವಣೆಯಲ್ಲಿ 20 ಸ್ಥಾನ ಸೋತರೂ ಪ್ರಿಯಕೃಷ್ಣ ಒಬ್ಬರೇ ಗೆದ್ದಿದ್ದರು. ಪಕ್ಷಕ್ಕೆ ನೀಡಿರುವ ಕೊಡುಗೆಗೆ ಬೆಲೆ ಇಲ್ಲವೇ ಎಂದು ಕಿಡಿಕಾರಿದರು.

ರಾಹುಲ್‌ ಗಾಂಧಿಯೇ ಮಾತನಾಡ್ತಾರೆ: ಬಿಕೆ
ಕೃಷ್ಣಪ್ಪ ಅವರಿಗೆ ಸಹಜವಾಗಿಯೇ ಬೇಸರ ಆಗಿದೆ. ಅವರು ಪಕ್ಷಕ್ಕೆ ಯಾವುದೇ ತೊಂದರೆ ಆಗದಂತೆ ನಡೆದಿಕೊಂಡಿರುವುದೇ ಸಂತೋಷ. ಅವರೊಂದಿಗೆ ರಾಹುಲ್‌ಗಾಂಧಿ ಅವರೇ ಮಾತನಾಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹೇಳಿದ್ದಾರೆ.

ಕೃಷ್ಣಪ್ಪ ಭೇಟಿ ಬಳಿಕ ಮಾತನಾಡಿ, ನಾನು ಹಾಗೂ ಕೃಷ್ಣಪ್ಪ ಅವರು ರೇಣುಕಾಚಾರ್ಯ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ನನಗೂ ಅವರಿಗೂ 40-50 ವರ್ಷದ ಸಂಬಂಧ. ಅವರ ಅಸಮಾಧಾನ ತಣಿಸುವ ಎಲ್ಲಾ ಪ್ರಯತ್ನ ನಡೆಯುತ್ತಿದೆ. ರಾಹುಲ್‌ಗಾಂಧಿ ಅವರೇ ಮಾತನಾಡಬಹುದು ಎಂದು ಹೇಳಿದರು.

ಬೇರೆಯವರ ಸ್ಥಾನ ತಪ್ಪಿಸಿ ಕೃಷ್ಣಪ್ಪ ಅವರಿಗೆ ಅವಕಾಶ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಎಲ್ಲವೂ ಸಾಧ್ಯ. ರಾಜಕೀಯ ಎಂಬುದು ಗೇಮ್‌ ಆಫ್‌ ಪಾಸಿಬಿಲಿಟೀಸ್‌. ಎಲ್ಲವನ್ನೂ ನೋಡುತ್ತಿದ್ದಾರೆ, ಅಸಮಾಧಾನ ಬಗೆಹರಿಯಲಿದೆ ಎಂದು ಸೂಚ್ಯವಾಗಿ ನುಡಿದರು.

ಚಪ್ಪಡಿ ಎಳೆದರೆ ಸಹಿಸಿಕೊಳ್ಳಬೇಕಾ?
ಕಾಂಗ್ರೆಸ್‌ ಅನ್ನು ಉದ್ಧಾರ ಮಾಡಬೇಕು ಎಂದು ಮಾಡಿದ್ದೀರಾ ಅಥವಾ ಹಾಳು ಮಾಡಬೇಕು ಎಂದುಕೊಂಡಿದ್ದೀರಾ? ಸುಮ್ಮನಿದ್ದೇವೆಂದು ತಲೆ ಮೇಲೆ ಚಪ್ಪಡಿ ಎಳೆದರೆ ಸಹಿಸಬೇಕೇ? ಎಂದು ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಹೇಳಿದರು.

Leave a Reply

Your email address will not be published. Required fields are marked *