BBMP
Loading ...

RTI

Greater Bengaluru News9 : ಬೆಂಗಳೂರಿನಲ್ಲಿ ಆರ್​ಟಿಐ (RTI) ಅಸ್ತ್ರ ಬಳಸಿ ಹೋಟೆಲ್ ಉದ್ಯಮಿಯೊಬ್ಬರಿಗೆ ಬ್ಲಾಕ್‌ಮೈಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲು ಯತ್ನಿಸಿದ ಕುಖ್ಯಾತ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದೆ. ಕೇವಲ ಹತ್ತು ರೂಪಾಯಿ ಖರ್ಚು ಮಾಡಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವ ಈ ವಂಚಕರ ತಂಡ, ನಂತರ ನೇರವಾಗಿ ಬ್ಲಾಕ್‌ಮೈಲ್ ಮತ್ತು ಸೆಟಲ್ಮೆಂಟ್ ಧಂಧೆಗೆ ಇಳಿಯುತ್ತಿತ್ತು.

ಯಲಹಂಕ ವಲಯದ ಶ್ರೀರಾಮಪುರ ಗ್ರಾಮದಲ್ಲಿ ಹೋಟೆಲ್ ಉದ್ಯಮಿಯೊಬ್ಬರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಆರ್​ಟಿಐ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ಈ ಅರ್ಜಿಯನ್ನು ವಾಪಸ್ ಪಡೆಯಲು ಮತ್ತು ಯಾವುದೇ ಕಾನೂನು ಕ್ರಮ ಜರುಗಿಸದಂತೆ ಬೆದರಿಸಿ ಬೃಂದಾ ನೇತೃತ್ವದ ಗ್ಯಾಂಗ್ ಬರೋಬ್ಬರಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿತ್ತು.

ಮೈಸೂರು ಮೂಲದ ಆರ್​ಟಿಐ ಕಾರ್ಯಕರ್ತೆ ಬೃಂದಾ ಹಾಗೂ ಬಿಜೆಪಿ ಕಾರ್ಯಕರ್ತ ಎನ್ನಲಾದ ಮಂಜುನಾಥ್ ಮತ್ತು ಪರಮೇಶ್ ಗ್ಯಾಂಗ್ ಈ ಅಕ್ರಮ ಸೆಟಲ್ಮೆಂಟ್ ಡೀಲಿಂಗ್ ಹಿಂದೆ ಇತ್ತು. ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತುಕತೆ ನಡೆಸಿ ಅಂತಿಮವಾಗಿ 13 ಲಕ್ಷ ರೂಪಾಯಿಗೆ ಡೀಲ್ ಕುದುರಿಸಿಕೊಂಡಿದ್ದ ಈ ಕಳ್ಳರ ತಂಡ, ಮುಂಗಡವಾಗಿ ಎರಡು ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸಿತ್ತು.

ಉದ್ಯಮಿಯ ದೂರಿನ ಮೇರೆಗೆ ಕಾರ್ಯಾಚರಣೆಗಿಳಿದ ಅಮೃತಹಳ್ಳಿ ಪೊಲೀಸರು, ಮಫ್ತಿಯಲ್ಲಿ ತೆರಳಿ ಹೋಟೆಲ್‌ನಲ್ಲಿ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಪಡೆಯುತ್ತಿದ್ದ ವೇಳೆ ಬೃಂದಾಳನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದರು. ಪೊಲೀಸರನ್ನು ಕಂಡ ತಕ್ಷಣ ಕಕ್ಕಾಬಿಕ್ಕಿಯಾದ ಆಕೆ, ತಾನು ಸಾಲ ಕೊಟ್ಟಿದ್ದೆ ವಾಪಸ್ ಪಡೆಯುತ್ತಿದ್ದೇನೆ ಎಂದು ನಾಟಕವಾಡಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

Leave a Reply

Your email address will not be published. Required fields are marked *