BBMP
Loading ...

DK Shivakumar

Greater Bengaluru News9 : ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ದ್ವಿತೀಯ ಹಂತದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆದಂತಿದ್ದು, ನವದೆಹಲಿಯಲ್ಲಿ ನಡೆದ ಸರಣಿ ಸಭೆಗಳ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುಮಾರು 16 ರಿಂದ 18 ನಾಯಕರ ಪಟ್ಟಿಗೆ ಅಂತಿಮ ಅಂಕಿತ ಹಾಕಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೋಮವಾರ ಸಂಜೆ 5 ಗಂಟೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕೃತ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ನಡೆದ ಪ್ರಮುಖ ಸಭೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭಾಗವಹಿಸಿದ್ದರು.

ಮುಖ್ಯಮಂತ್ರಿಗಳು ಸಲ್ಲಿಸಿದ ಸಂಭಾವ್ಯ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಹೈಕಮಾಂಡ್, ಜಾತಿ, ಪ್ರಾದೇಶಿಕ ಮತ್ತು ಹಿರಿಯ-ಕಿರಿಯ ನಾಯಕರ ಸಮತೋಲನವನ್ನು ಕಾಯ್ದುಕೊಂಡು ಪಟ್ಟಿಯನ್ನು ಆಖೈರುಗೊಳಿಸಿದೆ.

ಸಂಭಾವ್ಯ ಸಚಿವರ ಪಟ್ಟಿ (ಖಚಿತ ಮೂಲಗಳ ಪ್ರಕಾರ):

  • ಅಜಯ್ ಸಿಂಗ್
  • ಎನ್.ಎಸ್. ಬೋಸರಾಜು
  • ಯಶವಂತರಾಯಗೌಡ ಪಾಟೀಲ್
  • ಸಲೀಂ ಅಹಮದ್
  • ಶಿವಲಿಂಗೇಗೌಡ
  • ಟಿ. ರಘುಮೂರ್ತಿ
  • ಲಕ್ಷ್ಮಿ ಹೆಬ್ಬಾಳ್ಕರ್
  • ಶಿವರಾಜ್ ತಂಗಡಗಿ
  • ಬಸವರಾಜ್ ಶಿವಣ್ಣನವರ್
  • ಸಂತೋಷ್ ಲಾಡ್
  • ಜಿ.ಎಸ್. ಪಾಟೀಲ್
  • ಎನ್. ಚಲುವರಾಯಸ್ವಾಮಿ
  • ಶಿವಣ್ಣ
  • ಡಾ. ಎಚ್.ಸಿ. ಮಹದೇವಪ್ಪ
  • ಮಧು ಬಂಗಾರಪ್ಪ

ಸಂಪುಟ ಲೆಕ್ಕಾಚಾರ ಮತ್ತು ಪ್ರಾದೇಶಿಕ ಸಮತೋಲನ
ಪ್ರಸ್ತುತ ರಾಜ್ಯ ಸಂಪುಟದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ 14 ಸಚಿವರಿದ್ದು, ಗರಿಷ್ಠ 34 ಸಚಿವರ ಪೈಕಿ 20 ಸ್ಥಾನಗಳು ಖಾಲಿಯಿದ್ದವು. ಇದೀಗ ಹೈಕಮಾಂಡ್ ನೂತನ ಮುಖಗಳಿಗೆ ಮತ್ತು ಹಿರಿಯ ಅನುಭವಸ್ತರಿಗೆ ಆದ್ಯತೆ ನೀಡಿ 15 ಹೆಸರುಗಳನ್ನು ಅಂತಿಮಗೊಳಿಸಿದೆ. ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಿಗ್ಗೆ ರಾಜ್ಯಪಾಲರಿಗೆ ಅಧಿಕೃತ ಪಟ್ಟಿ ರವಾನೆಯಾಗಲಿದ್ದು, ಸಂಜೆ ವೇಳೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *