Greater Bengaluru News9 : ರಾಷ್ಟ್ರೀಯ ಹೆದ್ದಾರಿ 4ರ ಭಾಗವಾಗಿರುವ ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನ ಮೇಲ್ಮೈ ಡಾಂಬರೀಕರಣ (ಆಸ್ಫಾಲ್ಟಿಂಗ್) ಕಾಮಗಾರಿ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ (ಜುಲೈ 27) ಆಗಸ್ಟ್ 5 ರವರೆಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರಾತ್ರಿ ವೇಳೆಯಲ್ಲಿ ಮಾತ್ರ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸಂಚಾರ ಪೊಲೀಸ್ ಇಲಾಖೆ ಪರ್ಯಾಯ ಮಾರ್ಗಗಳನ್ನು ನಿಗದಿಪಡಿಸಿದೆ.
ಸಂಚಾರ ನಿಷೇಧದ ವೇಳಾಪಟ್ಟಿ:
ಸಾಮಾನ್ಯ ದಿನಗಳಲ್ಲಿ (ಸೋಮವಾರದಿಂದ ಶುಕ್ರವಾರ): ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ ಫ್ಲೈಓವರ್ ಬಂದ್ ಇರಲಿದೆ.
ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ): ರಾತ್ರಿ 12:00 ಗಂಟೆಯಿಂದ (ಮಧ್ಯರಾತ್ರಿ) ಬೆಳಿಗ್ಗೆ 5:00 ಗಂಟೆಯವರೆಗೆ ಮಾತ್ರ ಸಂಚಾರ ನಿರ್ಬಂಧ ಅನ್ವಯವಾಗಲಿದೆ.
ಪರ್ಯಾಯ ಮಾರ್ಗಗಳು:
ನೆಲಮಂಗಲ ಭಾಗದಿಂದ ಬೆಂಗಳೂರು ನಗರದ ಕಡೆಗೆ ಆಗಮಿಸುವ ವಾಹನ ಸವಾರರು ಕೆಳಗಿನ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸೂಚಿಸಲಾಗಿದೆ.
ನೆಲಮಂಗಲ ಕಡೆಯಿಂದ ಬರುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಎಲಿವೇಟೆಡ್ ರಸ್ತೆಯಿಂದ ಕೆಳಗಿಳಿದು ತಿರುವು ಪಡೆಯಬೇಕು. ನಂತರ 8ನೇ ಮೈಲಿವರೆಗೆ ಕೆಳಗಿನ ಮುಖ್ಯ ರಸ್ತೆ ಹಾಗೂ ಸರ್ವೀಸ್ ರಸ್ತೆಯನ್ನು ಬಳಸಿಕೊಂಡು ಮುಂದುವರಿಯಬೇಕು. ಮುಂದುವರಿದು ಜಾಲಹಳ್ಳಿ ಕ್ರಾಸ್ ಮೂಲಕ ಗೊರಗುಂಟೆಪಾಳ್ಯ ತಲುಪಿ ಮುಂದೆ ಸಾಗಬಹುದು.
ಕಾಮಗಾರಿ ನಡೆಯುವ ವೇಳೆಯಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಪಾಲಿಸಿ ಸಹಕರ ನೀಡುವುಂತೆ ಜನರಲ್ಲಿ ಮನವಿ ಮಾಡಲಾಗಿದೆ.


