BBMP
Loading ...

Flower Show

Greater Bengaluru News9 : ಬೆಂಗಳೂರಿನ ವಿಶ್ವಪ್ರಸಿದ್ಧ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಯಲಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ದಕ್ಷಿಣ ಕರ್ನಾಟಕವನ್ನು ದೀರ್ಘಕಾಲ ಆಳಿದ ಗಂಗ ರಾಜವಂಶದ ಇತಿಹಾಸ ಮತ್ತು ವೈಭವವನ್ನು ಹೂವುಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ.

ಆಗಸ್ಟ್ 6ರಿಂದ 17ರವರೆಗೆ ಒಟ್ಟು 12 ದಿನಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ ಗಂಗರ ಕಾಲದ ವಾಸ್ತುಶಿಲ್ಪ, ಸಂಸ್ಕೃತಿ, ಶಿಕ್ಷಣ ಹಾಗೂ ನಾಡಿಗೆ ನೀಡಿದ ಕೊಡುಗೆಗಳನ್ನು ಲಕ್ಷಾಂತರ ಹೂವುಗಳಿಂದ ಪ್ರದರ್ಶಿಸಲಾಗುತ್ತದೆ.

ಲಾಲ್‌ಬಾಗ್ ಗಾಜಿನ ಮನೆಯ ಮುಖ್ಯ ವೇದಿಕೆಯಲ್ಲಿ ಸುಮಾರು 1300 ವರ್ಷಗಳಷ್ಟು ಹಳೆಯದಾದ ಬೇಗೂರಿನ ನಾಗನಾಥೇಶ್ವರ ದೇವಸ್ಥಾನದ ಮಾದರಿ ಹೂವಿನ ಅಲಂಕಾರದಲ್ಲಿ ಕಂಗೊಳಿಸಲಿದೆ.

ಬೆಂಗಳೂರು ಎಂಬ ಹೆಸರಿನ ಮೊದಲ ಉಲ್ಲೇಖವಿರುವ ಕ್ರಿ.ಶ. 390ರ ಕನ್ನಡ ಶಾಸನ ಹೊಂದಿರುವ ಅಪರೂಪದ ಪಂಚಲಿಂಗ ದೇವಾಲಯವೂ ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಲಿದೆ.

ಹೂವಿನಲ್ಲಿ ಅರಳಲಿರುವ ಗಂಗರ ಇತಿಹಾಸ
ಗಂಗರ ಮಂತ್ರಿ ಚಾವುಂಡರಾಯ ನಿರ್ಮಿಸಿದ ಶ್ರವಣಬೆಳಗೊಳದ ಜೈನ ಬಸದಿ, 22ನೇ ತೀರ್ಥಂಕರ ನೇಮಿನಾಥ ಸ್ವಾಮಿಯ ವಿಗ್ರಹ, ಗೋಮಟೇಶ್ವರ ಪ್ರತಿಮೆ, ನಂದಿಬೆಟ್ಟದ ಯೋಗನಂದೀಶ್ವರ ದೇವಸ್ಥಾನ ಸೇರಿದಂತೆ ಹಲವು ಐತಿಹಾಸಿಕ ಪ್ರತಿರೂಪಗಳು ಹೂವಿನ ಅಲಂಕಾರದಲ್ಲಿ ಮೂಡಿಬರಲಿವೆ.

ಅಲ್ಲದೆ ಗಂಗ ರಾಜರಾದ ದಡಿಗ, ಕೊಂಗುಣಿವರ್ಮ, ಶ್ರೀಪುರುಷ, ರಾಚಮಲ್ಲ ಸೇರಿದಂತೆ ಪ್ರಮುಖ ರಾಜರ ಪ್ರತಿಮೆಗಳು ಕೂಡ ಹೂವುಗಳಿಂದ ನಿರ್ಮಾಣಗೊಳ್ಳಲಿವೆ.

ತೋಟಗಾರಿಕೆ ಇಲಾಖೆ ನಿರ್ದೇಶಕ ಜಗದೀಶ್ ಮಾತನಾಡಿ, “ಗಂಗ ರಾಜವಂಶವು ಕನ್ನಡ ಭಾಷೆ, ಸಾಹಿತ್ಯ, ನೀರಾವರಿ ಹಾಗೂ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಈ ಭವ್ಯ ಇತಿಹಾಸವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಗಂಗರಿಗೆ ಸಮರ್ಪಿಸಲಾಗಿದೆ” ಎಂದು ತಿಳಿಸಿದ್ದಾರೆ.

12 ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನವು ಪ್ರಕೃತಿ ಪ್ರೇಮಿಗಳ ಜೊತೆಗೆ ಇತಿಹಾಸಾಸಕ್ತರಿಗೂ ಗಂಗರ ವೈಭವವನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡಲಿದೆ.

Leave a Reply

Your email address will not be published. Required fields are marked *