Greater Bengaluru News9: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕೇವಲ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಟೋಲ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಜುಲೈ 21 ರಿಂದಲೇ ಪರಿಷ್ಕೃತ ದರಗಳು ಅಧಿಕೃತವಾಗಿ ಜಾರಿಗೆ ಬಂದಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಈ ಹಠಾತ್ ದರ ಹೆಚ್ಚಳದಿಂದ ಪ್ರತಿದಿನ ಪ್ರಯಾಣಿಸುವ ಸವಾರರ ಜೇಬಿಗೆ ಭಾರಿ ಕತ್ತರಿ ಬಿದ್ದಂತಾಗಿದೆ. ಈ ಹೊಸ ಆದೇಶವು ಎಕ್ಸ್ಪ್ರೆಸ್ವೇಯ (NH-275) ಮೊದಲ ಹಂತವಾದ ಬೆಂಗಳೂರು-ನಿಡಘಟ್ಟ ನಡುವಿನ 6 ಪಥಗಳ ರಸ್ತೆಯ ಪ್ರಮುಖ ಟೋಲ್ ಕೇಂದ್ರಗಳಿಗೆ ಅನ್ವಯಿಸುತ್ತದೆ.
ಪರಿಷ್ಕೃತ ಟೋಲ್ ದರಗಳ ಸಂಪೂರ್ಣ ಪಟ್ಟಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಕಣಿಮಿಣಿಕೆ ಟೋಲ್ ಪ್ಲಾಜಾ ಮತ್ತು ಬೆಂಗಳೂರು ದಕ್ಷಿಣ ವ್ಯಾಪ್ತಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ವರ್ಗಕ್ಕೆ ಅನುಗುಣವಾಗಿ ಬದಲಾದ ದರಗಳು ಈ ಕೆಳಗಿನಂತಿವೆ.
- ಕಾರು / ಜೀಪ್ / ವ್ಯಾನ್ (LMV)ಗಳಿಗೆ ಇದ್ದ ₹180 ರೂಪಾಯಿಯಿಂದ 185 ರೂಪಾಯಿಗೆ ಹೆಚ್ಚಳ.
- 24 ಗಂಟೆಗಳೊಳಗೆ ರಿಟರ್ನ್: 275 ರೂಪಾಯಿಗೆ ಏರಿಕೆ.
- 50 ಏಕಮುಖ ಪ್ರಯಾಣಗಳ ಮಾಸಿಕ ಪಾಸ್ ದರವು 5,940ರಿಂದ 6,100 ರೂಪಾಯಿಗೆ ಹೆಚ್ಚಳ ಆಗಿದೆ.
ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ: ಟೋಲ್ ಪ್ಲಾಜಾದಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ಸಾರ್ವಜನಿಕರ ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದನ್ನು ಮೊದಲಿನಂತೆಯೇ 360 ರೂಪಾಯಿ ಇರಲಿದೆ ಎಂದು ತಿಳಿಸಿದೆ.
- ಲಘು ವಾಹನ:- 285ರಿಂದ 295 ರೂ.ಗೆ ಹೆಚ್ಚಳ ಮಾಡಲಾಗಿದೆ (ಏಕಮುಖ ಸಂಚಾರ).
- ಟ್ರಕ್ / ಬಸ್ (ಟೂ-ಆಕ್ಸಲ್): 600 ರೂ.ನಿಂದ 620 ರೂಪಾಯಿಗೆ ಹೆಚ್ಚಳ.
- ಮೂರು ಆಕ್ಸಲ್ ಟ್ರಕ್/ ಬಸ್: 675 ರೂಪಾಯಿ.
- ಭಾರಿ ವಾಹನ (4 ರಿಂದ 6 ಆಕ್ಸಲ್): 940 ರೂಪಾಯಿಂದ 975 ರೂಪಾಯಿಗೆ ಹೆಚ್ಚಳ.
- ಮಲ್ಟಿ ಆಕ್ಸಲ್ ವಾಹನ: 1,145 ರೂಪಾಯಿಯಿಂದ 1,180 ರೂಪಾಯಿ ಹೆಚ್ಚಳ.
NHAI ಹೇಳಿದ್ದೇನು?
NHAI ಅಧಿಕಾರಿಗಳ ಪ್ರಕಾರ, ಜನವರಿ 25, 2023 ರ ಟೋಲ್ ಗೆಜೆಟ್ ಅಧಿಸೂಚನೆ ಸಂಖ್ಯೆ S.O. 402(E) ಮತ್ತು ಜುಲೈ 18, 2026 ರ ಸಕ್ಷಮ ಪ್ರಾಧಿಕಾರದ ಅನುಮೋದನೆ ಪತ್ರದ ಅನ್ವಯ ಈ ಪರಿಷ್ಕೃತ ದರಗಳನ್ನು ಪ್ರಕಟಿಸಲಾಗಿದೆ. ಹೈಬ್ರಿಡ್ ಅನ್ವಿಟಿ ಮಾಡೆಲ್ (HAM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು-ನಿಡಘಟ್ಟ ವಿಭಾಗಕ್ಕೆ 2026-27ರ ಹಣಕಾಸು ವರ್ಷಕ್ಕೆ ಈ ಪರಿಷ್ಕೃತ ಟೋಲ್ ದರಗಳು ಅನ್ವಯಿಸುತ್ತವೆ” ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ದಿ ಹಿಂದೂ ವೆಬ್ಸೈಟ್ ವರದಿ ಮಾಡಿದೆ.
ಏಪ್ರಿಲ್ 1, 2026 ರಂದು ವಾರ್ಷಿಕ ಟೋಲ್ ದರ ಪರಿಷ್ಕರಣೆ ಜಾರಿಗೆ ಬಂದ ಕೇವಲ ಮೂರು ತಿಂಗಳಲ್ಲೇ ಈ ಹೊಸ ದರ ಏರಿಕೆ ಬಂದಿದೆ. ಆಗ ಕಾರುಗಳ ಟೋಲ್ ದರವನ್ನು ಪ್ರತಿ ಟೋಲ್ ಪ್ಲಾಜಾಕ್ಕೆ ₹175 ರಿಂದ ₹180 ಕ್ಕೆ ಹೆಚ್ಚಿಸಲಾಗಿತ್ತು.
ಪ್ರಯಾಣಿಕರ ಆಕ್ರೋಶ
ಈ ರಸ್ತೆಯಲ್ಲಿ ನಿಯಮಿತವಾಗಿ ಪ್ರಯಾಣಿಸುವ ಆರ್.ಆರ್. ನಗರದ ನಿವಾಸಿ ಮನೋಜ್ ಪ್ರಸಾದ್ ಮಾತನಾಡಿ, ವರ್ಷಗಳಿಂದ ಟೋಲ್ ದರಗಳು ಪದೇ ಪದೇ ಹೆಚ್ಚುತ್ತಿರುವುದು ಅನ್ಯಾಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ನಮ್ಮಂತಹ ನಿರಂತರವಾಗಿ ಈ ಹೆದ್ದಾರಿಯನ್ನು ಬಳಸುವವರಿಗೆ, ಈ ದರ ಏರಿಕೆಯು ಮಾಸಿಕ ವೆಚ್ಚದ ಮೇಲೆ ಭಾರಿ ಹೊರೆಯಾಗಿದೆ. ಅಧಿಕಾರಿಗಳು ನಿಯಮಿತ ಪ್ರಯಾಣಿಕರ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೂ ಯಾವುದೇ ದರ ಏರಿಕೆ ಮಾಡುವಾಗ ಅದಕ್ಕೆ ತಕ್ಕಂತೆ ಉತ್ತಮ ಮೂಲಸೌಕರ್ಯ, ಸರಿಯಾದ ನಿರ್ವಹಣೆ ಮತ್ತು ಸುಧಾರಿತ ಸೌಲಭ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು,” ಎಂದು ಅವರು ಹೇಳಿದ್ದಾರೆ.


